ಹುಲಿ ಬಂತು ಹುಲಿ... ನವರಾತ್ರಿಯ ಹುಲಿ...!
ಶಾಲೆಗೆ ದಸರಾ ರಜೆ. ಯಾವಾಗ್ಲೂ ತಮ್ಮನ್ನೆಲ್ಲ ದಡಬಡಿಸಿ ಹೊರಡಿಸಿ, ಸ್ಕೂಲ್ ಬ್ಯಾಗು, ಬುತ್ತಿಚೀಲ, ನೀರು ಎಲ್ಲ ಕಟ್ಟಿಕೊಟ್ಟು ತಾನೂ ಗಡಿಬಿಡಿಯಲ್ಲಿ ಆಫೀಸಿಗೆ ಹೊರಡುವ ಅಮ್ಮನೂ ನಾಲ್ಕು ದಿನ ರಜೆ ಬರೆದು ಮನೆಯಲ್ಲಿದ್ದಾಳೆ. ಅಪರೂಪಕ್ಕೆ ಸಿಕ್ಕಿದ ಸ್ವಲ್ಪವೇ ಸ್ವಲ್ಪ ಪುರುಸೊತ್ತಿನಲ್ಲಿ ಮಕ್ಕಳು ಕೇಳಿದ ಸ್ವೀಟು, ಬನ್ಸು, ಗೋಳಿಬಜೆ ಅಂತೆಲ್ಲ ತಯಾರು ಮಾಡಿಕೊಟ್ಟು ಅವರ ಖುಷಿಯನ್ನು ನೋಡಿಯೇ ಮನಸ್ಸು ತುಂಬಿಸಿಕೊಳ್ಳುತ್ತಾಳೆ. ಅಪ್ಪನಿಗಾದರೂ ಅಷ್ಟೇ. ರಜೆ ಸಿಗದಿದ್ದರೂ ಏನೋ ಒಂದು ನಿರಾಳತೆ. ಸಂಜೆ ಬಂದು ಮಕ್ಕಳ ಹೋಂ ವರ್ಕ್ ಗಲಾಟೆ ಇಲ್ಲ. ವರ್ಕಿಂಗ್ ಹೆಂಡತಿಯೂ ಎಂದಿನಂತೆ ಸಿಡುಕುತ್ತಲೋ ಪರಂಚುತ್ತಲೋ ಮನೆಗೆಲಸ ಮಾಡುತ್ತಾ ದಣಿವೇ ಮೈದಾಳಿ ನಿಂತಿರುವುದಿಲ್ಲ. ಬೆಳಗ್ಗೆ ಸಂಜೆ ಎಲ್ಲ ಬಗೆಬಗೆಯ ತಿಂಡಿಗಳು. ಎಡೆ ಹೊತ್ತಿನಲ್ಲಿ ತಿನ್ನುವುದಕ್ಕೆ ಕುರುಂಕುರುಂ ಚಕ್ಕುಲಿ ಕೋಡುಬಳೆ. ಮಕ್ಕಳ ಕಲರವದಲ್ಲಿ ಮನೆಯ ಸ್ವರೂಪವೇ ಬದಲಾಯಿಸಿ ಬಿಟ್ಟಿರುತ್ತದೆ.
ತಿಂಡಿ ತಿಂದು ಹೊಟ್ಟೆ ಗಟ್ಟಿಯಾದ ಪುಟ್ಟ ಮಕ್ಕಳು ಇನ್ನೇನು ಆಟಕ್ಕೆ ಅಂತ ಹೊರಡಬೇಕು, ಕಿರ್ರನೇ ಗೇಟು ತೆರೆದ ಸದ್ದು. ರಜೆಯಲ್ಲಿ ಅಂತ ಅತ್ತೆ ಮಕ್ಕಳು, ಮಾವನ ಮಕ್ಕಳು ಬಂದರೋ ಅಂತ ಗೌಜಿಯೆಬ್ಬಿಸಬೇಕು ಅನ್ನುವಷ್ಟರಲ್ಲಿ ಬಂದವರು ಅವರಾರೂ ಅಲ್ಲ. ಹತ್ತಾರು ಹುಲಿಗಳು, ಮರಿಹುಲಿಗಳು! ತಿಂಡಿಗಾಗಿ ಜಗಳಾಡುವಾಗ ಅಪ್ಪ ಹೇಳುವ ‘ಅರ್ಧ ರೊಟ್ಟಿ ಸಾಕಮ್ಮಾ’ ಕಥೆಯ ಕಣ್ಣು ಪಿಳಿಪಿಳಿ, ಬಾಲ ಪಟಪಟ ಮಾಡುತ್ತಾ ಬರುವ ಹುಲಿಯದ್ದೇ ನೆನಪಾಗಿ ಮಕ್ಕಳೆಲ್ಲ ಅಮ್ಮನ ಸೆರಗಿನ ಮರೆಯಲ್ಲಿ ಗಪ್ ಚುಪ್. ಅಲ್ಲಿಂದಲೂ ಮೆಲ್ಲನೇ ಇಣುಕಿ ನಿಜವಾಗಿಯೂ ಬಂದಿರುವುದು ಹುಲಿಯೇನಾ ಎಂದು ನೋಡುವ ಭಯಮಿಶ್ರಿತ ಕಾತರ.
ಅರೇ... ಈ ಹುಲಿಗಳಿಗೆ ನಾಲ್ಕು ಕಾಲಿಲ್ಲ, ಬರೇ ಎರಡು ಕಾಲುಗಳಿರುವುದು... ಕಣ್ಣೆಲ್ಲ ನಮ್ಮ ಹಾಗೆ. ಟಿವಿಯಲ್ಲಿ, ಚಿತ್ರದಲ್ಲೆಲ್ಲ ನೋಡಿದ ನಿಜವಾದ ಹುಲಿಗಳ ಹಾಗೆ ಬಗ್ಗಿ ನಾಲ್ಕು ಕಾಲುಗಳಲ್ಲಿ ನಡೆಯುವುದಲ್ಲ! ಸಾಲದ್ದಕ್ಕೆ ಡಿಂಗುಟಕರ ಟಕ್ಕಟಕರ ಅನ್ನುವ ಲಯಬದ್ಧ ಕುಣಿತ. ಟೈಗರ್ ಟೈಗರ್ ಬರ್ನಿಂಗ್ ಬ್ರೈಟ್... ಅಲ್ಲಲ್ಲ, ಟೈಗರ್ ಟೈಗರ್ ಡ್ಯಾನ್ಸಿಂಗ್ ಸ್ಮಾರ್ಟ್... ಭಯವೀಗ ಸೋಜಿಗವಾಗಿ ಮಾರ್ಪಟ್ಟು ನಗೆಯೇ ಮೊಗವಾಗಿ ಅರಳಿದ ಮಕ್ಕಳು ಅಮ್ಮನೆದುರು ಬಂದು ನಿಲ್ಲುತ್ತಾರೆ. ಮಕ್ಕಳು ಎದುರಿದ್ದರೆ ಈ ಹುಲಿಗಳಿಗೂ ಮೈಯ್ಯಲ್ಲಿ ಕಸುವು ಹೆಚ್ಚಿಗೆ. ಕುಣಿತ ಮತ್ತೂ ತ್ವರಿತಗತಿಯಲ್ಲಿ ಸಾಗುತ್ತದೆ. ಪುಟಾಣಿಗಳೆಲ್ಲ ಕಣ್ಣುಬಾಯಿ ಬಿಟ್ಟುಕೊಂಡು ನೋಡುತ್ತಾರೆ. ಅವರಿಗೆ ಹುಲಿಗಳ ಕುಣಿತಕ್ಕಿಂತಲೂ ಅವುಗಳ ಬಣ್ಣಗಾರಿಕೆಯೇ ಹೆಚ್ಚು ಆಕರ್ಷಕ. ಆ ಕಪ್ಪು-ಹಳದಿ ನಯನಮನೋಹರ ಜುಗಲ್‌ಬಂದಿ ಬೇರೆಲ್ಲಿ ಸಿಕ್ಕೀತು? ಆದರೆ, ಆ ವೇಷ ಧರಿಸುವ, ದಿನದ ಕೊನೆಯಲ್ಲಿ ಆ ಬಣ್ಣಗಳನ್ನು ನಿವಾರಿಸುವ ಕಷ್ಟ, ನರನಾಡಿಖಂಡಗಳಲ್ಲಿ ಹೊಯ್ದಾಡುವ ಆಯಾಸದ ಸಂಕಷ್ಟ ಏನೆಂಬುದು ಆ ‘ಹುಲಿ’ಗಳಿಗಳಿಗಷ್ಟೇ ಗೊತ್ತು. ಬಣ್ಣ ಹಾಕುವುದಾಗಲೀ, ತೆಗೆಯುವುದಾಗಲೀ, ಜನರನ್ನು ರಂಜಿಸುವುದಾಗಲೀ, ದಣಿವಾರಿಸಿಕೊಳ್ಳುವುದಾಗಲೀ ಎಲ್ಲವಕ್ಕೂ ಅವುಗಳದ್ದೇ ಆದ ಧ್ಯಾನವೊಂದು ಬೇಕೆಂಬುದು ಮಾತ್ರ ನೂರಕ್ಕೆ ನೂರು ನಿಜ.
ಇರಲಿ, ಕುಣಿತ ಮುಗಿಸಿದ ಹುಲಿಗಳು ಅಪ್ಪ ಕೊಟ್ಟ ಕಾಸು ತೆಗೆದುಕೊಂಡು ಗೇಟಿನಿಂದಾಚೆ ಕಣ್ಣು ಪಿಳಿಪಿಳಿ ಬಾಲ ಪಟಪಟ ಮಾಡುತ್ತಾ ಮುಂದಿನ ಮನೆಗೋ ಅಂಗಡಿಗೋ ಹೋಗುತ್ತವೆ. ಜನಸಂದಣಿ ಜಾಸ್ತಿ ಇದ್ದಲ್ಲಿ ತರಹೇವಾರಿಯಾಗಿ ಕುಣಿಯುತ್ತವೆ. ಸಂಜೆ ಸರಿದು ಕತ್ತಲಾಗುವವರೆಗೂ ಕುಣಿದು ದಣಿಯುತ್ತವೆ. ನವರಾತ್ರಿ ಕಳೆಯುವಾಗ ಅವರ ಹರಕೆಯೂ ಪೂರ್ಣವಾಗಿರುತ್ತದೆ.
ಹುಲಿವೇಷಗಳು ಮಾತ್ರ ಅಲ್ಲ. ಕರಡಿ, ಬೇಟೆಗಾರ, ಸಿಂಹ, ದೇವದೇವರುಗಳೆಲ್ಲ ನವರಾತ್ರಿ ವೇಷಗಳಾಗಿ ಮನೆಮುಂದೆ ಬರುತ್ತವೆ. ಪುಟ್ಟಮಕ್ಕಳು ಇಷ್ಟಿಷ್ಟು ಹೆದರುತ್ತವೆ; ಮತ್ತೆಷ್ಟೋ ಖುಷಿ ಪಡುತ್ತವೆ. ರಜೆ ಸಿಕ್ಕಿದ್ದೆಲ್ಲ ಹೀಗೆ ವೇಷಗಳನ್ನು ನೋಡುತ್ತಾ ಅಚ್ಚರಿ ಪಡುವುದಕ್ಕೆ ಇರಬೇಕು ಅನ್ನುವಷ್ಟರ ಮಟ್ಟಿಗೆ ಶಾಲೆಯನ್ನು ಮರೆತೇ ಬಿಡುತ್ತವೆ. ದಸರಾ ರಜೆಯ ಗಮ್ಮತ್ತು ಹೆಚ್ಚುವುದು ಬಹುಶಃ ಇದೇ ಕಾರಣಕ್ಕೆ. ಯಾವುದೇ ವೇಷ ಬಂದು ಹೋಗಲಿ; ಮನೆಮಂದಿಗೆ ಆ ಸಂಜೆ ಉಚಿತ ಮನರಂಜನೆ ಮತ್ತೂ ಕಾದಿರುತ್ತದೆ. ಹುಲಿಕುಣಿತಕ್ಕೆ ಮಾರುಹೋದ ಮಕ್ಕಳು ಮನೆಯೊಳಹೊರಗೆಲ್ಲ ತಮ್ಮದೇ ಶೈಲಿಯಲ್ಲಿ ನಾಟ್ಯ ಶುರು ಮಾಡುತ್ತವೆ. ದೊಡ್ಡಕ್ಕನಿಗೋ ಅಣ್ಣನಿಗೋ ಚೆಂಡೆ ಬಾರಿಸುವ ಕೆಲಸ. ಅದಕ್ಕೇನೂ ನಿಜವಾದ ಚೆಂಡೆ ಬೇಕಾಗುವುದಿಲ್ಲ. ಆಟಕ್ಕೆಂದು ಅಪ್ಪ ಕೊಡಿಸಿದ ಡೋಲು ಸಿಕ್ಕಿದರೂ ಸಾಕು. ಅದೂ ಇಲ್ಲವಾದರೆ ಮನೆಯ ಮೇಜು ಕುರ್ಚಿಗಳೂ ಸಾಕು. ಅಡುಗೆ ಮನೆಯ ಪಾತ್ರೆ ಸೌಟುಗಳಾದರೂ ಸರಿ. ಅಂತೂ ಹುಲಿಕುಣಿತದ ಲಯ ಸಿಗಬೇಕು! ರಾತ್ರಿ ಪೂರಾ ಯಕ್ಷಗಾನ ಬಯಲಾಟ ಕಣ್ತುಂಬಿಕೊಂಡುಬಂದವರು ಮರುದಿನ ಮನೆ ಜಗುಲಿಯನ್ನೇ ರಂಗಸ್ಥಳ ಮಾಡುವ ಹಾಗೆ.
ನವರಾತ್ರಿಯ ಒಂದೆರಡು ದಿನಗಳು ಕಳೆದರೆ ಸಾಕು. ಮಕ್ಕಳ ಹೆದರಿಕೆ ಗುಡ್ಡೆ ಹತ್ತುತ್ತದೆ. ಮತ್ತೆ ಪ್ರತಿ ದಿನವೂ ಇಂದ್ಯಾವ ವೇಷ ಬರುತ್ತದೋ ಅಂತ ಕಾದು ನೋಡುವ ತವಕ. ಈಗೀಗ ಯಕ್ಷಗಾನದ ಪಕಡಿಯೋ, ಕಿರೀಟವೇಷವೋ ಸ್ತ್ರೀ ವೇಷಗಳೂ ನವರಾತ್ರಿಯ ಸಮಯ ಕಾಣಸಿಗುತ್ತವೆ. ಬೆಳಗ್ಗಿಂದ ರಾತ್ರಿಯವರೆಗೂ ವೇಷ ಕಟ್ಟಿಕೊಂಡು ಅದು ಹೇಗೆ ಸಂಬಾಳಿಸುತ್ತಾರೋ ಎಂದೆನ್ನಿಸಿದರೂ ವೇಷಗಳ ಕುಣಿತ ನೋಡುವಾಗ ಬೇರೇನೂ ನೆನಪಾಗುವುದಿಲ್ಲ. ಹೆಚ್ಚೆಚ್ಚು ವೇಷಗಳು ಬಂದಷ್ಟೂ ಮನೆಮಕ್ಕಳಿಗೆ ಸಂತೋಷ. ಮಕ್ಕಳ ಈ ಗೌಜಿಯಲ್ಲಿಯೇ ದಸರಾ ರಜೆಯೂ ಕಳೆಗಟ್ಟುತ್ತದೆ. ಎಂದಿನ ಹಾಗೆ ಟ್ಯೂಷನ್, ರಿವಿಷನ್ ಅನ್ನುವ ಕಾಟವಿಲ್ಲದೆ ಅವರೂ ಆರಾಮವಾಗಿದ್ದುಬಿಡುತ್ತಾರೆ!
ಈಗೀಗಂತೂ ದಸರಾ ಎಂದರೆ ಮೈಸೂರಿಗೇನೂ ಕಮ್ಮಿಯಿಲ್ಲ ಎಂಬ ಹಾಗೆ ಕುಡ್ಲವೂ ಕಳೆಗಟ್ಟುತ್ತದೆ. ಮಂಗಳಾದೇವಿಯಿಂದ ತೊಡಗಿ ಕುದ್ರೋಳಿಯವರೆಗೆ, ಧರ್ಮಸ್ಥಳದಿಂದತೊಡಗಿ ಕಟೀಲಿನವರೆಗೆ, ಸುಳ್ಯದಿಂದ ತೊಡಗಿ ಪುತ್ತೂರಿನವರೆಗೆ ಎತ್ತ ನೋಡಿದರತ್ತ ನವರಾತ್ರಿ ಚಿತ್ರ. ಆಸ್ತಿಕರಿಗೆ ಪೂಜೆ-ಪುನಸ್ಕಾರಗಳ ಗೌಜು, ಮನರಂಜನೆ ಪ್ರಿಯರಿಗೆ ಸಾಂಸ್ಕೃತಿಕ ವೈಭವದ ಗುಂಗು, ಹತ್ತನೆಯ ದಿನವಂತೂ ರಾತ್ರಿಯಿಡೀ ಶೋಭಾಯಾತ್ರೆಯ ಹಬ್ಬ. ಬಣ್ಣ, ಬೆಳಕು, ಥಳಕು, ಸಂಭ್ರಮ, ಸಂಗೀತ, ನೃತ್ಯ... ಅದು ಮುಂದಿನ ವರ್ಷದ ಸಡಗರದವರೆಗೆ ಅಚ್ಚಳಿಯದೆ ಉಳಿಯುವ ನೆನಪು. ದಸರಾದ ನೆಪದಲ್ಲಿ ಜಿಲ್ಲೆಯ, ರಾಜ್ಯದ ಬಗೆಬಗೆಯ ಜಾನಪದ-ಸಾಂಸ್ಕೃತಿಕ ಪ್ರಕಾರಗಳನ್ನು ಸವಿಯುವ ಅವಕಾಶವಲ್ಲದೆ ದೇಶದ ನಾನಾ ಭಾಗಗಳ ವೈವಿಧ್ಯತೆಗಳನ್ನು ಒಂದೇ ಕಡೆ ಕಾಣುವ ಸುವರ್ಣಾವಕಾಶ. ಈಚಿನ ವರ್ಷಗಳಲ್ಲಂತೂ ಮಂಗಳೂರು ದಸರಾ ವಿದೇಶೀಯರನ್ನೂ ಆಕರ್ಷಿಸುತ್ತಿದೆ. ಹೌದು, ದಸರಾ ಎಂದರೆ ಹಬ್ಬ ಅಷ್ಟೇ ಅಲ್ಲ, ಅದೊಂದು ಜಗತ್ತು.
- ಆರತಿ ಪಟ್ರಮೆ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ