ನೂರು ಮುಖ, ನೂರು ಬಗೆ, ಮೂರು ಗಾಲಿ ಸವಾರಿಗೆ...
[ಕೃಪೆ: ಪ್ರಜಾವಾಣಿ (ಮಂಗಳೂರು) ೨೪.೦೧. ೨೦೧೧]
ಬಹುಶಃ ಪೇಟೆಯ ಬದುಕಲ್ಲಿ ನಮಗಿದು ಇತರ ಎಲ್ಲ ಅವಶ್ಯಕತೆಗಳ ಜತೆಗೆ ಬಹು ಮುಖ್ಯವಾಗಿ ಬೇಕಾದದ್ದು. ಸ್ಥಳ ಪರಿಚಯ ಇರುವಲ್ಲಿಗಾಗಲೀ, ಬರಿಯ ವಿಳಾಸವಷ್ಟೇ ಗೊತ್ತಿರುವಲ್ಲಿಗಾಗಲೀ ಎಲ್ಲಿಗೆ ಹೋಗಬೇಕಾದರೂ ನಮಗೆ ಸ್ವಂತ ವಾಹನವಿಲ್ಲವಾದಲ್ಲಿ ಇದೇ ಗತಿ. ಪೇಟೆಯ ಒಳಹೊರಗೆ ಎಲ್ಲೆಂದರಲ್ಲಿ ನೋಡಿದರೂ ಇದರ ಸಂಖ್ಯೆಯೂ ಬರೋಬ್ಬರಿ. ಅಂದರೂ ಯಾಕೋ ನಮಗೆ ಆಟೋರಿಕ್ಷಾಗಳೆಂದರೆ ಒಂದು ನಮೂನೆ ಸಸಾರ. ಎಲ್ಲರಿಗೂ ಬೇಕಾಗಿದ್ದರೂ ಬಳಸುವವರೆಲ್ಲರಿಂದ ದೂಷಣೆಗೊಳಗಾಗುವ ಸಾಮಾನ್ಯ ವಸ್ತುಗಳ ಪೈಕಿ ಆಟೋರಿಕ್ಷಾ
ಈ ಆಟೋರಿಕ್ಷಾಗಳೂ ಅಷ್ಟೇ ಬಿಡಿ. ಬೈದಷ್ಟೂ ಬೈಸಿಕೊಳ್ಳುತ್ತವೆ, ಯಾವುದೇ ಮುಲಾಜಿಲ್ಲದೆ. ಹೆಚ್ಚಿನಂಶ ಯಾವಾಗಲೂ ಬೈಸಿಕೊಂಡು ಅದೇ ರೂಢಿಯಾಗಿರಬೇಕು. ಯಾರೇನೇ ಅಂದರೂ ಕ್ಯಾರೇ ಮಾಡದೇ ತಮ್ಮ ಪಾಡಿಗೆ ತಾವು ನುಸುಳಿಕೊಂಡು ಸಾಗುತ್ತಲೇ ಇರುತ್ತವೆ ಪೇಟೆಯುದ್ದಗಲಕ್ಕೂ. ಅತ್ತಲಿಂದ ಬಸ್ಸು ಬರಲಿ, ಇತ್ತಲಿಂದ ಲಾರಿ ಬರಲಿ, ಎದುರಿಂದ ಕಾರು ಬರಲಿ, ಹಿಂದಿನಿಂದ ಬೈಕು ಬರಲಿ ಇವು ಯಾರನ್ನೂ ಗಣ್ಯ ಮಾಡದೇ ಮುನ್ನುಗ್ಗುತ್ತಿರುತ್ತವೆ. ಎಲ್ಲಿ ಯಾವುದು ಢೀ ಕೊಟ್ಟೀತೋ ಹಿಂದಿನಿಂದ ಬಂದು ಹೊಡೆದೀತೋ ಎಂಬಿತ್ಯಾದಿಗಳ ಬಗ್ಗೆ ಯಾವುದೇ ಗಮನವಿಲ್ಲದೆ ಸಾಗುತ್ತಲೇ ಇರುತ್ತವೆ; ಮನೆಯೊಳಗೆ ಸದಾ ಗುಲ್ಲೆಬ್ಬಿಸುತ್ತಿರುವ ಸಣ್ಣ ಮಕ್ಕಳ ಹಾಗೆ.
ಯಾವ ಊರಿನಲ್ಲೇ ಆಗಲಿ, ನೀವು ಗಮನಿಸಿ ನೋಡಿ, ರಿಕ್ಷಾಗಳು ಓಡುವುದು ಒಂದೇ ನಮೂನೆ. ಉಳಿದೆಲ್ಲ ವಾಹನಗಳು ಪಾಲಿಸುವ ರಸ್ತೆ ನಿಯಮಗಳು ಇವುಗಳಿಗೆ ಅನ್ವಯವಾಗುವುದು ಕಡಿಮೆ. ಎಲ್ಲಿ ಬೇಕೆಂದರಲ್ಲಿ ಇವು ಯು ಟರ್ನ್ ತಿರುಗುತ್ತವೆ. ರಸ್ತೆ ನಡುವೆಯೇ ಕೇಟುಕೇಳಿಲ್ಲದೇ ರೊಯ್ಯನೇ ತಿರುಗುತ್ತವೆ. ಉಳಿದ ವಾಹನಗಳೆಲ್ಲ ಟ್ರಾಫಿಕ್ಕಿನ ಗೌಜಿಯಲ್ಲಿ ಹೇಗೆ ಹೋಗುವುದಪ್ಪಾ ಎಂದು ತಲೆಕೆರೆದುಕೊಳ್ಳುತ್ತಿರಬೇಕಾದರೆ ರಿಕ್ಷಾಗಳು ಅದು ಹೇಗೋ ನುಸುಳಿಕೊಂಡು ದಾರಿ ಮಾಡಿಕೊಂಡು ತಪ್ಪಿಸಿಕೊಳ್ಳುತ್ತವೆ. ಎಡದಿಂದ ಬಲಕ್ಕೋ ಬಲದಿಂದ ಎಡಕ್ಕೋ ಬೇಕುಬೇಕಾದ ಹಾಗೆ ಸಾಗಿಯೇ ಸಾಗುತ್ತವೆ. ಒಂದು ಚಕ್ರ ನುಗ್ಗಿದರಾಯ್ತು, ಉಳಿದವೆರಡು ಹೇಗಾದರೂ ಬರುತ್ತವೆ ಬಿಡಿ ಎಂಬ ದಾರ್ಷ್ಟ್ಯ ಅವುಗಳದ್ದು! ಇವು ಹೋಗುವ ಫೋರ್ಸಿಗೆ ಊರಿಗೆ ಊರೇ ಬೆಕ್ಕಸ ಬೆರಗಾಗಬೇಕು ಅಷ್ಟೇ.
ಒಂದ್ಸರ್ತಿ ಪದುವಾದಿಂದ ಕದ್ರಿಯವರೆಗೆ ಬರಬೇಕಿತ್ತು. ಸರಿ, ನಾನೂ ಬೆಂಗಳೂರಿನಿಂದ ಬಂದಿದ್ದ ಸಹೋದ್ಯೋಗಿಯೊಬ್ಬರೂ ರಿಕ್ಷಾವೊಂದರಲ್ಲಿ ಹೊರಟೆವು. ಆ ಮಾರ್ಗ ಕಾಂಕ್ರೀಟುಗೊಳ್ಳುತ್ತಿದ್ದ ಸಮಯ. ಧೂಳಿಗೆ ಬರವಿರಲಿಲ್ಲ. ಸಾಲದ್ದಕ್ಕೆ ಈ ರಿಕ್ಷಾ ಡ್ರೈವರ್ರೂ ಯರ್ರಾಬಿರ್ರಿ ಓಡಿಸುತ್ತಿದ್ದ. ನಾವಿಬ್ಬರೂ ಹೆದರಿಕೆಯಿಂದ ಜೀವ ಕೈಯ್ಯಲ್ಲಿ ಹಿಡಿದುಕೊಂಡು ಕೂತಿದ್ದೆವು. ರಿಕ್ಷಾದವನು ರಸ್ತೆಗೂ ರಿಕ್ಷಾಕ್ಕೂ ಯಾವುದೇ ಸಂಬಂಧವಿಲ್ಲ ಅನ್ನುವ ಹಾಗೆ ಹೋಗುತ್ತಲೇ ಇದ್ದ. ಅದೇ ಹೊತ್ತಿಗೆ ಎದುರಿನಿಂದ ಲಾರಿಯೊಂದು ಬರುತ್ತಿತ್ತು. ಸಡನ್ನಾಗಿ ನನ್ನ ಜತೆಗಿದ್ದಾಕೆ ಅಯ್ಯೋ ಸ್ವಲ್ಪ ನಿಧಾನ ಹೋಗ್ರೀ. ಎದುರಿಂದ ಲಾರಿ ಬೇರೆ ಬರ್ತಾ ಇದೆ ಅಂತ ಕೂಗಿಕೊಂಡರು.
ಅಷ್ಟು ಹೇಳಿದ್ದೇ ಹೇಳಿದ್ದು. ಆ ಚಾಲಕನಿಗೆ ಸಿಟ್ಟು ನೆತ್ತಿಗೇರಿತು. ತನ್ನ ವೇಗವನ್ನು ಕೊಂಚವೂ ಕಡಿಮೆ ಮಾಡದೇ ಕುಳಿತಲ್ಲಿಂದಲೇ ನಮ್ಮನ್ನು ಬೈಯ್ಯಲಾರಂಭಿಸಿದ. ವಿನಾಕಾರಣ ತನ್ನ ಡ್ರೈವಿಂಗ್ ಬಗ್ಗೆ ಅನುಮಾನ ಪಡಬಾರದು; ವಾಹನದ ಮೇಲೆ ತನಗಷ್ಟು ಕಂಟ್ರೋಲ್ ಇರುವುದಕ್ಕೇ ವೇಗವಾಗಿ ಹೋಗೋದು ಹೊರತು ಡ್ರೈವಿಂಗ್ ಬಾರದೇ ಅಲ್ಲ. ಎದುರಿನಿಂದ ಯಾವ ವಾಹನ ಬರ್ತಾ ಇದೆ, ಅದನ್ನು ತಪ್ಪಿಸಿಕೊಂಡು ಹೋಗಬೇಕಾದರೆ ಹೇಗೆ ಹೋಗಬೇಕು, ಯಾವಾಗ ಬ್ರೇಕ್ ಹಿಡಿಯಬೇಕು ಎಂಬುದೆಲ್ಲಾ ತನಗೆ ಗೊತ್ತಿದೆ. ಪ್ರಯಾಣಿಕರು ಸುಮ್ಮನೇ ಕುಳಿತಿರಬೇಕು ಅನ್ನುವುದು ಅವನ ಮಾತಿನ ಸಾರಾಂಶ.
ನಾವು ಪ್ರತಿಯಾಡದೇ ಜೀವಸಹಿತ ಆಫೀಸಿನೆದುರು ಇಳಿದರೆ ಸಾಕಪ್ಪಾ ಅಂತ ದೇವರಲ್ಲಿ ಪ್ರಾರ್ಥಿಸಿಕೊಂಡು ಮೌನವಾಗಿದ್ದೆವು. ಅವನಾಡಿದ ಮಾತನ್ನೇ ಮೆಲುಕು ಹಾಕಿದರೆ ಅದರಲ್ಲಿ ಅಲ್ಲವೆನ್ನುವಂಥದ್ದು ಇರಲಿಲ್ಲ. ವಾಹನದ ಮೇಲಿನ ಕಂಟ್ರೋಲ್ ಇಲ್ಲದೇ ಯಾರೂ ರಸ್ತೆಯಲ್ಲಿ ಗಾಡಿ ಓಡಿಸುವ ಸಾಹಸ ಮಾಡುವುದಿಲ್ಲ. ಆದರೂ ತನ್ನ ವಾಹನ ತಾನು ಹೇಳಿದ ಹಾಗೆ ಕೇಳುತ್ತದೆ ಎಂಬ ಕಾರಣಕ್ಕೆ ಭರ್ರನೇ ಹೋಗಬೇಕಾಗಿಲ್ಲ ಅನ್ನುವುದೂ ನಿಜವೇ. ರಸ್ತೆಯ ಮೇಲೆ ನೂರಾರು ವಾಹನಗಳು ಓಡಾಡುವಾಗ ಎಲ್ಲ ದಿನ, ಎಲ್ಲ ಕ್ಷಣ ಒಂದೇ ತೆರನಾಗಿರುವುದಿಲ್ಲವಲ್ಲ? ಎಂಥದ್ದೇ ಸುಳಿನೀರಿನಲ್ಲಿ ಸಲೀಸಾಗಿ ಈಜಬಲ್ಲ ಈಜುಗಾರನೂ ಪ್ರವಾಹಕ್ಕೆ ಸಿಲುಕುವುದು ಅಚ್ಚರಿಯೇನಲ್ಲವಲ್ಲ? ಆದರೆ ಗಾಡಿಯೋಡಿಸುವ ಭರದಲ್ಲಿ ಗಾಳಿಗೆ ಸ್ಪರ್ಧೆ ಕೊಡುವುದೇ ಮುಖ್ಯ ಎಂದೆಸಿದರೆ ಅಪಾಯ ನಮ್ಮನ್ನು ಸದಾ ಸುತ್ತುವರಿದಿರುವುದಿಲ್ಲವೇ?
ಯಾರಾದರೂ ಕಪ್ಪು ಹಳದಿ ಕಾಂಬಿನೇಷನ್ ಡ್ರೆಸ್ ಹಾಕ್ಕೊಂಡರೂ ಆಟೋರಿಕ್ಷಾ ಬಂತು ಅಂತ ಸಹಪಾಠಿಗಳು ರೇಗಿಸುತ್ತಿದ್ದುದಿತ್ತು. ರಿಕ್ಷಾದ ಬಣ್ಣಗಳ ಬಗೆಗೂ ನಮಗೊಂದು ತಿರಸ್ಕಾರ. ಆದರೆ ಪೇಟೆಯಲ್ಲಿ ಇದೇ ಕಪ್ಪು-ಹಳದಿ ಬಣ್ಣ ಇಲ್ಲವೇ ಇಲ್ಲವೆಂದಾದಲ್ಲಿ ನಮ್ಮ ಓಡಾಟವನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಬಸ್ಸಿನ ಓಡಾಟ ಕಡಿಮೆ ಇರುವಲ್ಲಿ ಅಥವಾ ಬಸ್ಸಿಗೆ ಕಾಯುವ ವ್ಯವಧಾನ ಇಲ್ಲವಾದಲ್ಲಿ, ಲಗ್ಗೇಜು ಹಿಡಕೊಂಡು ಸಿಕ್ಕಾಪಟ್ಟೆ ರಷ್ ಇರುವ ಬಸ್ಸಲ್ಲಿ ಹತ್ತಿಕೊಳ್ಳಲೇ ಸಾಧ್ಯವಿಲ್ಲ ಎಂದಿದ್ದರೂ ನಾವು ರಿಕ್ಷಾಗಳಿಗೆ ಮೊರೆಹೋಗಲೇ ಬೇಕು.
ಕೆಲವೊಮ್ಮೆ ಮಾತ್ರ ನಮ್ಮ ಜನರ ಮೆಂಟಾಲಿಟಿ ಬಗ್ಗೆ ಬೇಸರವೆನಿಸುವುದಿದೆ. ರಿಕ್ಷಾಗಳೆಂದರೆ ಎಷ್ಟು ಅಸಡ್ಡೆ ಮಾಡುತ್ತೇವೋ ಅಷ್ಟೇ ರಿಕ್ಷಾಚಾಲಕರನ್ನೂ ನಿರ್ಲಕ್ಷ ಮಾಡಿಬಿಡುತ್ತೇವೆ-ಅವರೂ ನಮ್ಮ ನಿಮ್ಮ ಹಾಗೆ ಎನ್ನುವುದನ್ನು ಮರೆತು. ಕೆಲವು ತಾಯ್ತಂದೆಯರು ಮಕ್ಕಳನ್ನು ಬೈಯ್ಯುವಾಗ ಹೇಳುವುದಿದೆ, ಓದದೇ ಮತ್ತೇನು ರಿಕ್ಷಾ ಡ್ರೈವರ್ ಆಗಬೇಕೆಂದಿದ್ದೀಯಾ ಎಂದು. ಹಾಗೆ ನೋಡಿದರೆ ರಿಕ್ಷಾ ಡ್ರೈವರುಗಳ ಪೈಕಿ ಎಷ್ಟೋ ಮಂದಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಂಬಲಿಸಿ ಆಸೆ ಕೈಗೂಡದೇ ಜೀವನೋಪಾಯಕ್ಕಾಗಿ ಈ ವೃತ್ತಿ ಆರಿಸಿಕೊಂಡದ್ದಿರಬಹುದು. ತಾನು ಮನೆ ಬೆನ್ನೆಲುಬಾಗಿ ನಿಂತು ಒಡಹುಟ್ಟಿದವರನ್ನು ಓದಿಸುವ ಹೊಣೆಗಾರಿಕೆ ಹೊತ್ತಿರಬಹುದು. ರಿಕ್ಷಾ ಓಡಿಸುತ್ತಲೇ ದೂರಶಿಕ್ಷಣದ ಮೂಲಕ ವಿದ್ಯಾಭ್ಯಾಸ ಮುಂದುವರಿಸಿಯೂ ಇರಬಹುದು. ತಮ್ಮ ವಿದ್ಯಾಭ್ಯಾಸ ಏನೇ ಇದ್ದರೂ ಹರಸಾಹಸಪಟ್ಟು ತಮ್ಮ ಮಕ್ಕಳಿಗೆ ಉನ್ನತೋನ್ನತ ಶಿಕ್ಷಣ ಕೊಡಿಸುವ ಅಟೋ ಚಾಲಕರೂ ಇಲ್ಲದಿಲ್ಲ. ಈ ಯಾವ ಗೊಡವೆಯೂ ಇಲ್ಲದೇ ಜನ ಮಾತ್ರ ರಿಕ್ಷಾ ಡ್ರೈವರುಗಳನ್ನು ಪುಂಡರೋ ಪೋಕರಿಗಳೋ ಅಂತ ಸರ್ಟಿಫಿಕೇಟು ಕೊಟ್ಟು ಬಿಡುತ್ತಾರೆ- ಅವರಿಗಾಗಬಲ್ಲ ನೋವಿನ ಪರಿಜ್ಞಾನವೇ ಇಲ್ಲದ ಹಾಗೆ.
ಇವರ ತಾಳಕ್ಕೆ ಸರಿಗಟ್ಟುವ ಹಾಗೆ ರಿಕ್ಷಾಚಾಲಕರೂ ಕೆಲವೊಮ್ಮೆ ವರ್ತಿಸುವುದಿದೆ. ಮೀಟರೇ ಹಾಕದೇ ಓಡಿಸಿ ಒಂದಕ್ಕೆರಡು ಚಾರ್ಜು ವಸೂಲಿ ಮಾಡುತ್ತಾರೆ. ಅಪರಿಚಿತರು ಬಂದಾಗ ಹತ್ತಿರದ ರಸ್ತೆಯ ಬದಲು ಸುತ್ತುಬಳಸಿ ಕರೆದೊಯ್ಯುತ್ತಾರೆ. ಯಾರ್ಯಾರನ್ನೋ ರೇಗಿಸುವುದೋ ಚುಡಾಯಿಸುವುದೋ ಮಾಡುತ್ತಾರೆ. ಆದರೆ ಇವರ ನಡುವೆಯೂ ಪ್ರಯಾಣಿಕರು ಬಿಟ್ಟು ಹೋದ ಬ್ಯಾಗನ್ನೋ ಸೂಟ್‌ಕೇಸನ್ನೋ ವಿಳಾಸ ಹುಡುಕಿ ಹಿಂದಿರುಗಿಸುವ ಪ್ರಾಮಾಣಿಕರಿದ್ದಾರೆ. ವಿದೇಶೀಯರು ನಮ್ಮ ದೇಶವನ್ನು ಭಿಕ್ಷುಕರ ದೇಶ ಅಂದದ್ದಕ್ಕೆ ಕೆಂಡಾಮಂಡಲ ಸಿಟ್ಟುಕೊಳ್ಳುವ ದೇಶಪ್ರೇಮಿಗಳಿದ್ದಾರೆ. ತೀರಾ ಹೊಸಬರನ್ನೂ ಅವರು ತಲುಪಬೇಕಾದ ವಿಳಾಸಕ್ಕೆ ಕರೆದೊಯ್ಯುವ ಸಹೃದಯರಿದ್ದಾರೆ. ಅಂಥವರಿಗೆಲ್ಲ ಒಂದು ನಮ್ರತೆಯ ನಮೋ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ