ಆನ್ಲೈನ್ ಶಿಕ್ಷಣ: ಬದಲಾದೀತೇ ಸಾಮರ್ಥ್ಯದ ಮಾನದಂಡ?
ಜೂನ್ 17, 2020ರ 'ಪ್ರಜಾಪ್ರಗತಿ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ
ಅನಿವಾರ್ಯತೆ ಹೌದೋ ಅಲ್ಲವೋ, ಅಂತೂ ಹೆಚ್ಚಿನ ಶಾಲಾ ಕಾಲೇಜುಗಳು ದಿನಕ್ಕೆ ಒಂದೆರಡು ಗಂಟೆಗಳಾದರೂ ಆನ್ಲೈನ್ ತರಗತಿ ನಡೆಸುವುದನ್ನು ಪ್ರಾರಂಭಿಸಿವೆ. ಎಲ್‌ಕೆಜಿಯ ಮಕ್ಕಳನ್ನೂ ಈ ಪ್ರಯೋಗ ಹೊರಗಿಟ್ಟಿಲ್ಲ. ಬೆಂಗಳೂರಿನ ಖಾಸಗಿ
ವಿವಿಯೊಂದು ಪದವಿ ಪರೀಕ್ಷೆಗಳನ್ನೇ ಆನ್ಲೈನ್ ಮೂಲಕ ಮಾಡಿ ಮುಗಿಸಿರುವುದಾಗಿ ಘೋಷಿಸಿದೆ. ಮಕ್ಕಳ ಮೇಲಿನ ಪರಿಣಾಮ ಒಂದು ತೆರನಾದ್ದಾದರೆ ಶಿಕ್ಷಕವೃಂದದ ಮುಂದಿರುವ ಸವಾಲುಗಳೂ ಸಣ್ಣವಲ್ಲ. ಹೊಸತೊಂದು ವ್ಯವಸ್ಥೆಗೆ ಒಗ್ಗಿಕೊಳ್ಳಲೇಬೇಕಾದ ಸಂದಿಗ್ಧಕ್ಕೆ ಉಪನ್ಯಾಸಕ ವರ್ಗ ಶರಣಾಗಿದೆ. ನಾವು ನಾವಾಗಿಯೇ ಬದಲಾಗುವುದಕ್ಕೂ ಬೇರೆ ವಿಧಿಯಿಲ್ಲದೇ ಬದಲಾಗುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆಯಲ್ಲ? ಹಣ್ಣುಗಳನ್ನು ಬಲವಂತವಾಗಿ ಮಾಗಿಸುವ ಪ್ರಯತ್ನದಂತೆ ಮನಸ್ಸುಗಳನ್ನು ಮಾಗಿಸುವ ಪ್ರಯತ್ನ ಇದಾಗದೇ ಎಂಬುದೂ ಯೋಚಿಸಬೇಕಾದ ವಿಚಾರವೇ.
ಇನ್ನೂ ಮುಗಿಯಬೇಕಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡರೆ ಈಗಿನ ಗೊಂದಲಮಯ ಪರಿಸ್ಥಿತಿಯಲ್ಲಿ ಮಕ್ಕಳು ಕಳೆದ ಶೈಕ್ಷಣಿಕ ವರ್ಷದುದ್ದಕ್ಕೂ ಕಲಿಸಿರುವುದನ್ನು ಮರೆತೇ ಹೋಗಿರಬಹುದೇನೋ ಎಂಬ ಅನುಮಾನವೂ ಒಂದೆಡೆ ಕಾಡುತ್ತದೆ. ಹಾಗಾಗಿ ಅಗತ್ಯ ಇರುವವರಿಗಾದರೂ ಪುನರ್ಮನನ ತರಗತಿಗಳನ್ನು ನಡೆಸುವುದು ಸೂಕ್ತವೆಂದು ಒಂದೆಡೆ ಅನ್ನಿಸಿದರೆ ಪರೀಕ್ಷೆ ಮಾಡದೇ ಇರುವುದೇ ಕ್ಷೇಮ ಎಂಬ ಅನಿಸಿಕೆಗಳೂ ಹರಿದು ಬರುತ್ತಿವೆ. ಶಾಲಾಮಟ್ಟದಲ್ಲೇ ನಡೆಸಿರಬಹುದಾದ ಮೂರು ಹಂತದ ಪೂರ್ವಸಿದ್ಧತಾ ಪರೀಕ್ಷೆಗಳ ಅಂಕಗಳನ್ನೇ ಸರಾಸರಿ ತೆಗೆದು ಇಲಾಖೆಗೆ ಸಲ್ಲಿಸಿ ಮಕ್ಕಳಿಗೆ ಅಂಕಪಟ್ಟಿ ಕೊಟ್ಟರಾಗಲಿಲ್ಲವೇ ಎಂಬುದು ಯೋಚಿಸಬಹುದಾದ ಕ್ರಮವೇ. ಉಳಿದು ಹೋದ ಪಿಯುಸಿಯ ಇಂಗ್ಲಿಷ್ ಪರೀಕ್ಷೆಯೂ ಅಷ್ಟೇ. ಸದಾ ಹೊಂಚು ಹಾಕುತ್ತಲೇ ಬೆಂಬತ್ತುತ್ತಿರುವ ಸಾವನ್ನು ಗೆದ್ದವರು ಯಾರೂ ಇಲ್ಲ ಎಂಬುದು ನಿಜವಾದರೂ ಮನೆಯೊಳಗೆ ಕ್ಷೇಮವಾಗಿರಲಿ ಎಂದು ಪೋಷಕರು ಹಾರೈಸುವ ಮಕ್ಕಳನ್ನು ಪರೀಕ್ಷೆಯ ನೆಪದಲ್ಲಿ ಹೊರಗೆಳೆಯುವುದು ಎಷ್ಟು ಕ್ಷೇಮ? ಅಭಿಮನ್ಯು ಚಕ್ರವ್ಯೂಹದೊಳಗೆ ಸಿಲುಕಿಕೊಂಡಂತಾದರೆ ಎದುರಾಗಬಲ್ಲ ನೋವಿಗೂ ಸಾವಿಗೂ ಯಾರು ಹೊಣೆ?
ಆನ್‌ಲೈನ್ ತರಗತಿಗಳ ಚಿತ್ರಣವೊಂದು ಕಣ್ಣಮುಂದೆ ಬಂದರೆ ಮಾತ್ರ ಯಾವುದೋ ವಿಷಾದ ಆವರಿಸುತ್ತದೆ. ಅದು ಸುಧಾರಣೆಯೇ ಎಂದರೆ ಹೌದು. ಅಲ್ಲವೇ ಎಂದರೆ ಯೋಚಿಸುವುದು ಬಹಳವಿದೆ. ತರಗತಿ ತುಂಬಾ ಮಕ್ಕಳಿದ್ದು, ಅವರ ಗದ್ದಲ ಗಲಾಟೆಗಳನ್ನು ನಿಯಂತ್ರಿಸಿಕೊಂಡು, ಅವರಲ್ಲಿ ಬೋಧಿಸುವ ವಿಚಾರದ ಕುರಿತು ಚರ್ಚೆ ಮಾಡುತ್ತಾ ಮುಕ್ತವಾಗಿ ಪಾಠ ಮಾಡಿದಂತೆ ಇಲ್ಲಿ ಮಾಡಲಾಗದು. ಎಂದಿನ ದಿನಗಳಲ್ಲಿ ಶಿಕ್ಷಕರು ಯೋಚಿಸುವುದೆಂದರೆ ತರಗತಿ ನಿಶ್ಶಬ್ದವಾಗಿದ್ದರೆ ಒಂದು ಗಂಟೆಯಲ್ಲಿ ಎಷ್ಟೋ ವಿಚಾರಗಳನ್ನು ಅವರಿಗೆ ಮನದಟ್ಟು ಮಾಡಿಬಿಡಬಹುದು ಎಂದು. ವಿದ್ಯಾರ್ಥಿಗಳು ಎದುರಿಗಿದ್ದಾಗ ಅದು ಸರಿ. ಆದರೆ ಕಣ್ಣೆದುರಿನ ಲ್ಯಾಪ್‌ಟಾಪಿನಲ್ಲಿ ಮಕ್ಕಳ ಪೋಟೋವಷ್ಟೇ ಕಾಣುವಾಗ ಅವರಲ್ಲಿ ಸಂವಹನ ನಡೆಸುವ ಪರಿಯೇ ಬಹಳ ಕಠಿಣ. ನಾವೇನೋ ಒಂದು ಗಂಟೆಯಲ್ಲಿ ಬಹಳಷ್ಟನ್ನು ಹೇಳಬಹುದು, ಆದರೆ ನಿಜಕ್ಕೂ ಕಲಿಸಿದ್ದೇವೆ ಎಂಬ ಸಮಾಧಾನ ಹೇಗೆ? ಮನೆಯಲ್ಲಿ ಹೇಗಿದ್ದರೋ ಹಾಗೆ ಕಂಪ್ಯೂಟರ್ ಎದುರು ಕುಳಿತು ಕೇಳುವುದಕ್ಕೂ ಶಿಸ್ತಾಗಿ ಸಮವಸ್ತ್ರ ಧರಿಸಿ ತರಗತಿಯಲ್ಲಿ ಪಾಠ ಕೇಳುವುದಕ್ಕೂ ನಡುವೆ ಸಣ್ಣ ಅಂತರವಿದೆಯಲ್ಲ? ಮನಸ್ಸು, ಶರೀರ ಅದೇ ಆಗಿರಬಹುದು. ಆದರೆ ಕಲಿಕಾ ವಾತಾವರಣವನ್ನು ಮಕ್ಕಳು ತಾವಾಗಿ ಸೃಷ್ಟಿಸುವಂತೆ ಮಾಡುವುದು ಸುಲಭವಲ್ಲ.
ಹಲವು ವಿಷಯಗಳ ಆನ್‌ಲೈನ್ ಬೋಧನೆಗೆ ಪಿಪಿಟಿಗಳೋ, ಚಿತ್ರಗಳೋ ಸಹಾಯಕ್ಕೆ ಬಂದಾವು. ಆದರೆ ಬೋರ್ಡ್ ತುಂಬಾ ಬರೆದೇ ಪಾಠ ಬೋಧಿಸಬೇಕಾದ ಗಣಿತದ ಕತೆ ಏನು? ತನ್ನ ಶಾಲೆಯಿಂದ ಬಂದ ವೇಳಾಪಟ್ಟಿಯಲ್ಲಿ ಗಣಿತ ಇಲ್ಲದ್ದನ್ನು ನೋಡಿ ಅದನ್ನು ಬಹುವಾಗಿ ಇಷ್ಟ ಪಡುವ ಮಕ್ಕಳಿಗೆ ಏನನ್ನಿಸಬಹುದು? (ನನ್ನ ಮಗಳು ಟೈಮ್‌ಟೇಬಲ್‌ನಲ್ಲಿ ಗಣಿತವಿಲ್ಲ ಎಂಬುದನ್ನು ದಿನಕ್ಕೆ ಹತ್ತುಬಾರಿ ಹೇಳುತ್ತಿದ್ದಾಳೆ.) ಕಂಪ್ಯೂಟರಲ್ಲಿ ವೈಟ್‌ಬೋರ್ಡಿನ ಅವಕಾಶ ಇದೆಯಾದರೂ ಅಪ್ಪಟ ಕರಿಹಲಗೆಯಲ್ಲಿ ಬರೆದಷ್ಟು ಸಲೀಸಾಗಿ ಇದರಲ್ಲಿ ಬರೆಯಲಾಗದು! ಅದರಲ್ಲಿನ ಕೈಬರಹ ಶಿಕ್ಷಕರಿಗೆ ಅಭ್ಯಾಸವಾಗುವುದಕ್ಕೇ ಸಮಯ ಬೇಕಾದೀತು. ಇನ್ನೊಂದು ವಿಚಾರವನ್ನೂ ಇಲ್ಲಿ ಗಮನಿಸಬೇಕು. ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ಬೋಧಿಸುವವರೆಂದು ಸಮಸ್ತ ವಿದ್ಯಾರ್ಥಿವೃಂದದಿಂದ ಮೆಚ್ಚುಗೆಗೊಳಗಾದ ಉಪನ್ಯಾಸಕರೂ ಆನ್‌ಲೈನ್ ತಮಗೆ ಒಗ್ಗುವುದಿಲ್ಲವೆಂದು ಕೈಚೆಲ್ಲಿರುವುದು. ಇದಂತೂ ಕಳವಳದ ವಿಚಾರವೇ ಹೌದಷ್ಟೇ?
ಇನ್ನಿರುವ ಆಯ್ಕೆ ತರಗತಿಯಲ್ಲೇ ಅವರು ಬೋಧಿಸುತ್ತಾ ಮಾಮೂಲಿನಂತೆ ಅವರ ಬಳಕೆಯ ಬೋರ್ಡನ್ನೇ ಉಪಯೋಗಿಸಿಕೊಳ್ಳುವುದು. ಆದರೆ ಹೆಚ್ಚಿನ ಸಂದರ್ಭಗಳಲ್ಲೂ ಈ ಹಂತವಾದ ಮೇಲೆ ಇಂತದ್ದೆಂದೋ ಅಥವಾ ನಿರ್ದಿಷ್ಟ ಹಂತದ ಉತ್ತರವನ್ನೋ ವಿದ್ಯಾರ್ಥಿಗಳಿಂದ ಬಯಸಿ, ತಾನು ಕಲಿಸುತ್ತಿರುವ ವಿಧಾನ ವಿದ್ಯಾರ್ಥಿಗಳಿಗೆ ಮನದಟ್ಟಾಗುತ್ತಿದೆ ಎಂಬ ತೃಪ್ತಿಯೊಂದಿಗೆ ಮುಂದಿನ ಹಂತವನ್ನು ಕಲಿಸುವ ಶಿಕ್ಷಕರಿಗೆ ಪ್ರಸ್ತುತದ ಆನ್‌ಲೈನ್ ಕ್ಲಾಸುಗಳು ತಂದಿಟ್ಟಿರುವ ಅನಾಥಭಾವ ಶಬ್ದಕ್ಕೆ ನಿಲುಕದ್ದು. ತರಗತಿಗಳಲ್ಲಿ ವಿದ್ಯಾರ್ಥಿಗಳು ಮಾಡುವ ಕುಚೇಷ್ಟೆಗಳ ಕಾಟ ಇಲ್ಲಿಲ್ಲವಲ್ಲ ಎಂದುಕೊಂಡರೆ ಇಲ್ಲಿ ಅದಕ್ಕಿಂತ ಹೆಚ್ಚು ತುಂಟಾಟಗಳಿಗೆ ಅವಕಾಶ. ಅನಗತ್ಯ ಮಾತುಕತೆ, ಅಧ್ಯಾಪಕರು ಶೇರ್ ಮಾಡಿದ ಸ್ಕ್ರೀನ್ ಮೇಲೆಯೇ ವಿದ್ಯಾರ್ಥಿಗಳು ಬೇಕಾಬಿಟ್ಟಿ ಗೀಚುವುದು ಇಂಥವನ್ನೆಲ್ಲ ನಿಯಂತ್ರಿಸುವುದು ತುಂಬ ಕಷ್ಟ. ಹಾಗೆಂದು ಇದರಿಂದ ಹಿಮ್ಮೆಟ್ಟಿದರೆ ಯುದ್ಧಕಾಲದಲ್ಲಿ ಶಸ್ತ್ರ ಸಂನ್ಯಾಸ ಮಾಡಿದ ಭೀಷ್ಮಾಚಾರ್ಯ, ದ್ರೋಣಾಚಾರ್ಯರ ಕಥೆಯಾದೀತು ನಮ್ಮದು. ದಂಡಿಸುವುದಕ್ಕೆ ಶಿಖಂಡಿಯೋ, ದೃಷ್ಟದ್ಯುಮ್ನನೋ ಸದಾ ಸಿದ್ಧರಿದ್ದಾರು.
ಕೊರೋನಾದಿಂದಾಗಿ ಜೀವನದ ಓಟಕ್ಕೆ ಸಣ್ಣದೊಂದು ಬ್ರೇಕ್ ಬಿದ್ದಿತೆಂದು ನಾವೆಂದುಕೊಂಡರೆ ಓಟ ನಿಂತದ್ದಲ್ಲ, ಓಡಬೇಕಾದ ಕ್ರಮ ಬದಲಾಗಬೇಕಿದೆ ಎಂಬ ಸೂಚನೆ ದೊರೆತದ್ದಾಗಿದೆ. ಬದಲಾದ ಓಟದಲ್ಲಿ ಇಲ್ಲಿಯವರೆಗಿನ ಸೋಲುಗೆಲುವುಗಳ ಮಾದರಿಗಳೆಲ್ಲವೂ ಬದಲಾದಾವು ಎಂಬುದಂತೂ ಸ್ಪಷ್ಟ. ಎದುರಿಗಿರುವ ಶೈಕ್ಷಣಿಕ ವರ್ಷ ಮಕ್ಕಳ ಕಲಿಕೆಯ ಕ್ರಮವನ್ನೂ ಶಿಕ್ಷಕರ ಬೋಧನಾ ಕ್ರಮವನ್ನೂ ಖಂಡಿತವಾಗಿಯೂ ಪಲ್ಲಟಗೊಳಿಸುತ್ತದೆ. ಡಾರ್ವಿನ್ನನ ’ಸಮರ್ಥನಾದವನು ಉಳಿಯುತ್ತಾನೆ’ ಎಂಬ ಸಿದ್ಧಾಂತ ಇಲ್ಲಿಗೂ ಅಕ್ಷರಶಃ ಅನ್ವಯಿಸಲಿದೆ. ಆದರೆ ತನ್ನ ಅಧ್ಯಯನದ ಕ್ಷೇತ್ರದಲ್ಲಿ ಬಹುಸಮರ್ಥನೆಂದು ಗುರುತಿಸಿಕೊಂಡವನೂ ತಂತ್ರಜ್ಞಾನದ ಸೂಕ್ತಬಳಕೆಯಲ್ಲಿ ದುರ್ಬಲನಾದರೆ ಅದರಿಂದಾಗುವ ನಷ್ಟ ಆ ಗುರುಗಳ ಶಿಷ್ಯರಾಗಬೇಕಿದ್ದವರಿಗೆ, ತನ್ಮೂಲಕ ಗುರುಗಳ ಜ್ಞಾನವನ್ನು ದಕ್ಕಿಸಿಕೊಳ್ಳಲಾಗದೇ ಹೋಗುವವರಿಗೆ.
ಕೊರೋನಾ ನಿರೀಕ್ಷೆಗೂ ಮೀರಿದ ಖೋ ಕೊಟ್ಟಿದೆ. ಶಿಕ್ಷಕರೀಗ ಓಡದಿದ್ದರೆ ಮುಗ್ಗರಿಸಿಯಾರೆಂಬ ಭಯವೂ ಇದೆ. ಆದರೆ ಕಳಕಳಿಯಿಷ್ಟೇ. ಜ್ಞಾನದ ದೃಷ್ಟಿಯಿಂದ ಎತ್ತರದಲ್ಲಿರುವ ಉಪನ್ಯಾಸಕನೊಬ್ಬನನ್ನು ತಂತ್ರಜ್ಞಾನದ ನೋಟ ಕೆಳಗಿಳಿಸದಿರಲಿ. ಅವರಲ್ಲಿನ ಆತ್ಮವಿಶ್ವಾಸ ಕುಗ್ಗದೇ ಇರಲಿ. ಇಡಿಯ ಶಿಕ್ಷಣಕ್ಷೇತ್ರದ ಭವಿಷ್ಯವೀಗ ಜ್ಞಾನ-ತಂತ್ರಜ್ಞಾನಗಳ ನಡುವೆ ಸಿಕ್ಕಿಕೊಂಡಿದೆ. ಅದು ಶಿಕ್ಷಕರಿಗೆ ಅಡಕತ್ತರಿಯಾಗದಂತೆ ಕಾಪಾಡಿಕೊಳ್ಳುವುದು ಸಮಾಜದ ಬದ್ಧತೆಯಾಗಿದೆ.
-ಆರತಿ ಪಟ್ರಮೆ
ಅನಿವಾರ್ಯತೆ ಹೌದೋ ಅಲ್ಲವೋ, ಅಂತೂ ಹೆಚ್ಚಿನ ಶಾಲಾ ಕಾಲೇಜುಗಳು ದಿನಕ್ಕೆ ಒಂದೆರಡು ಗಂಟೆಗಳಾದರೂ ಆನ್ಲೈನ್ ತರಗತಿ ನಡೆಸುವುದನ್ನು ಪ್ರಾರಂಭಿಸಿವೆ. ಎಲ್‌ಕೆಜಿಯ ಮಕ್ಕಳನ್ನೂ ಈ ಪ್ರಯೋಗ ಹೊರಗಿಟ್ಟಿಲ್ಲ. ಬೆಂಗಳೂರಿನ ಖಾಸಗಿ
ವಿವಿಯೊಂದು ಪದವಿ ಪರೀಕ್ಷೆಗಳನ್ನೇ ಆನ್ಲೈನ್ ಮೂಲಕ ಮಾಡಿ ಮುಗಿಸಿರುವುದಾಗಿ ಘೋಷಿಸಿದೆ. ಮಕ್ಕಳ ಮೇಲಿನ ಪರಿಣಾಮ ಒಂದು ತೆರನಾದ್ದಾದರೆ ಶಿಕ್ಷಕವೃಂದದ ಮುಂದಿರುವ ಸವಾಲುಗಳೂ ಸಣ್ಣವಲ್ಲ. ಹೊಸತೊಂದು ವ್ಯವಸ್ಥೆಗೆ ಒಗ್ಗಿಕೊಳ್ಳಲೇಬೇಕಾದ ಸಂದಿಗ್ಧಕ್ಕೆ ಉಪನ್ಯಾಸಕ ವರ್ಗ ಶರಣಾಗಿದೆ. ನಾವು ನಾವಾಗಿಯೇ ಬದಲಾಗುವುದಕ್ಕೂ ಬೇರೆ ವಿಧಿಯಿಲ್ಲದೇ ಬದಲಾಗುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆಯಲ್ಲ? ಹಣ್ಣುಗಳನ್ನು ಬಲವಂತವಾಗಿ ಮಾಗಿಸುವ ಪ್ರಯತ್ನದಂತೆ ಮನಸ್ಸುಗಳನ್ನು ಮಾಗಿಸುವ ಪ್ರಯತ್ನ ಇದಾಗದೇ ಎಂಬುದೂ ಯೋಚಿಸಬೇಕಾದ ವಿಚಾರವೇ.
![]() |
| ಆರತಿ ಪಟ್ರಮೆ | ಪ್ರಜಾಪ್ರಗತಿ | 17-06-2020 |
ಆನ್ಲೈನ್ ತರಗತಿಗಳ ಚಿತ್ರಣವೊಂದು ಕಣ್ಣಮುಂದೆ ಬಂದರೆ ಮಾತ್ರ ಯಾವುದೋ ವಿಷಾದ ಆವರಿಸುತ್ತದೆ. ಅದು ಸುಧಾರಣೆಯೇ ಎಂದರೆ ಹೌದು. ಅಲ್ಲವೇ ಎಂದರೆ ಯೋಚಿಸುವುದು ಬಹಳವಿದೆ. ತರಗತಿ ತುಂಬಾ ಮಕ್ಕಳಿದ್ದು, ಅವರ ಗದ್ದಲ ಗಲಾಟೆಗಳನ್ನು ನಿಯಂತ್ರಿಸಿಕೊಂಡು, ಅವರಲ್ಲಿ ಬೋಧಿಸುವ ವಿಚಾರದ ಕುರಿತು ಚರ್ಚೆ ಮಾಡುತ್ತಾ ಮುಕ್ತವಾಗಿ ಪಾಠ ಮಾಡಿದಂತೆ ಇಲ್ಲಿ ಮಾಡಲಾಗದು. ಎಂದಿನ ದಿನಗಳಲ್ಲಿ ಶಿಕ್ಷಕರು ಯೋಚಿಸುವುದೆಂದರೆ ತರಗತಿ ನಿಶ್ಶಬ್ದವಾಗಿದ್ದರೆ ಒಂದು ಗಂಟೆಯಲ್ಲಿ ಎಷ್ಟೋ ವಿಚಾರಗಳನ್ನು ಅವರಿಗೆ ಮನದಟ್ಟು ಮಾಡಿಬಿಡಬಹುದು ಎಂದು. ವಿದ್ಯಾರ್ಥಿಗಳು ಎದುರಿಗಿದ್ದಾಗ ಅದು ಸರಿ. ಆದರೆ ಕಣ್ಣೆದುರಿನ ಲ್ಯಾಪ್‌ಟಾಪಿನಲ್ಲಿ ಮಕ್ಕಳ ಪೋಟೋವಷ್ಟೇ ಕಾಣುವಾಗ ಅವರಲ್ಲಿ ಸಂವಹನ ನಡೆಸುವ ಪರಿಯೇ ಬಹಳ ಕಠಿಣ. ನಾವೇನೋ ಒಂದು ಗಂಟೆಯಲ್ಲಿ ಬಹಳಷ್ಟನ್ನು ಹೇಳಬಹುದು, ಆದರೆ ನಿಜಕ್ಕೂ ಕಲಿಸಿದ್ದೇವೆ ಎಂಬ ಸಮಾಧಾನ ಹೇಗೆ? ಮನೆಯಲ್ಲಿ ಹೇಗಿದ್ದರೋ ಹಾಗೆ ಕಂಪ್ಯೂಟರ್ ಎದುರು ಕುಳಿತು ಕೇಳುವುದಕ್ಕೂ ಶಿಸ್ತಾಗಿ ಸಮವಸ್ತ್ರ ಧರಿಸಿ ತರಗತಿಯಲ್ಲಿ ಪಾಠ ಕೇಳುವುದಕ್ಕೂ ನಡುವೆ ಸಣ್ಣ ಅಂತರವಿದೆಯಲ್ಲ? ಮನಸ್ಸು, ಶರೀರ ಅದೇ ಆಗಿರಬಹುದು. ಆದರೆ ಕಲಿಕಾ ವಾತಾವರಣವನ್ನು ಮಕ್ಕಳು ತಾವಾಗಿ ಸೃಷ್ಟಿಸುವಂತೆ ಮಾಡುವುದು ಸುಲಭವಲ್ಲ.
ಹಲವು ವಿಷಯಗಳ ಆನ್‌ಲೈನ್ ಬೋಧನೆಗೆ ಪಿಪಿಟಿಗಳೋ, ಚಿತ್ರಗಳೋ ಸಹಾಯಕ್ಕೆ ಬಂದಾವು. ಆದರೆ ಬೋರ್ಡ್ ತುಂಬಾ ಬರೆದೇ ಪಾಠ ಬೋಧಿಸಬೇಕಾದ ಗಣಿತದ ಕತೆ ಏನು? ತನ್ನ ಶಾಲೆಯಿಂದ ಬಂದ ವೇಳಾಪಟ್ಟಿಯಲ್ಲಿ ಗಣಿತ ಇಲ್ಲದ್ದನ್ನು ನೋಡಿ ಅದನ್ನು ಬಹುವಾಗಿ ಇಷ್ಟ ಪಡುವ ಮಕ್ಕಳಿಗೆ ಏನನ್ನಿಸಬಹುದು? (ನನ್ನ ಮಗಳು ಟೈಮ್‌ಟೇಬಲ್‌ನಲ್ಲಿ ಗಣಿತವಿಲ್ಲ ಎಂಬುದನ್ನು ದಿನಕ್ಕೆ ಹತ್ತುಬಾರಿ ಹೇಳುತ್ತಿದ್ದಾಳೆ.) ಕಂಪ್ಯೂಟರಲ್ಲಿ ವೈಟ್‌ಬೋರ್ಡಿನ ಅವಕಾಶ ಇದೆಯಾದರೂ ಅಪ್ಪಟ ಕರಿಹಲಗೆಯಲ್ಲಿ ಬರೆದಷ್ಟು ಸಲೀಸಾಗಿ ಇದರಲ್ಲಿ ಬರೆಯಲಾಗದು! ಅದರಲ್ಲಿನ ಕೈಬರಹ ಶಿಕ್ಷಕರಿಗೆ ಅಭ್ಯಾಸವಾಗುವುದಕ್ಕೇ ಸಮಯ ಬೇಕಾದೀತು. ಇನ್ನೊಂದು ವಿಚಾರವನ್ನೂ ಇಲ್ಲಿ ಗಮನಿಸಬೇಕು. ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ಬೋಧಿಸುವವರೆಂದು ಸಮಸ್ತ ವಿದ್ಯಾರ್ಥಿವೃಂದದಿಂದ ಮೆಚ್ಚುಗೆಗೊಳಗಾದ ಉಪನ್ಯಾಸಕರೂ ಆನ್‌ಲೈನ್ ತಮಗೆ ಒಗ್ಗುವುದಿಲ್ಲವೆಂದು ಕೈಚೆಲ್ಲಿರುವುದು. ಇದಂತೂ ಕಳವಳದ ವಿಚಾರವೇ ಹೌದಷ್ಟೇ?
ಇನ್ನಿರುವ ಆಯ್ಕೆ ತರಗತಿಯಲ್ಲೇ ಅವರು ಬೋಧಿಸುತ್ತಾ ಮಾಮೂಲಿನಂತೆ ಅವರ ಬಳಕೆಯ ಬೋರ್ಡನ್ನೇ ಉಪಯೋಗಿಸಿಕೊಳ್ಳುವುದು. ಆದರೆ ಹೆಚ್ಚಿನ ಸಂದರ್ಭಗಳಲ್ಲೂ ಈ ಹಂತವಾದ ಮೇಲೆ ಇಂತದ್ದೆಂದೋ ಅಥವಾ ನಿರ್ದಿಷ್ಟ ಹಂತದ ಉತ್ತರವನ್ನೋ ವಿದ್ಯಾರ್ಥಿಗಳಿಂದ ಬಯಸಿ, ತಾನು ಕಲಿಸುತ್ತಿರುವ ವಿಧಾನ ವಿದ್ಯಾರ್ಥಿಗಳಿಗೆ ಮನದಟ್ಟಾಗುತ್ತಿದೆ ಎಂಬ ತೃಪ್ತಿಯೊಂದಿಗೆ ಮುಂದಿನ ಹಂತವನ್ನು ಕಲಿಸುವ ಶಿಕ್ಷಕರಿಗೆ ಪ್ರಸ್ತುತದ ಆನ್‌ಲೈನ್ ಕ್ಲಾಸುಗಳು ತಂದಿಟ್ಟಿರುವ ಅನಾಥಭಾವ ಶಬ್ದಕ್ಕೆ ನಿಲುಕದ್ದು. ತರಗತಿಗಳಲ್ಲಿ ವಿದ್ಯಾರ್ಥಿಗಳು ಮಾಡುವ ಕುಚೇಷ್ಟೆಗಳ ಕಾಟ ಇಲ್ಲಿಲ್ಲವಲ್ಲ ಎಂದುಕೊಂಡರೆ ಇಲ್ಲಿ ಅದಕ್ಕಿಂತ ಹೆಚ್ಚು ತುಂಟಾಟಗಳಿಗೆ ಅವಕಾಶ. ಅನಗತ್ಯ ಮಾತುಕತೆ, ಅಧ್ಯಾಪಕರು ಶೇರ್ ಮಾಡಿದ ಸ್ಕ್ರೀನ್ ಮೇಲೆಯೇ ವಿದ್ಯಾರ್ಥಿಗಳು ಬೇಕಾಬಿಟ್ಟಿ ಗೀಚುವುದು ಇಂಥವನ್ನೆಲ್ಲ ನಿಯಂತ್ರಿಸುವುದು ತುಂಬ ಕಷ್ಟ. ಹಾಗೆಂದು ಇದರಿಂದ ಹಿಮ್ಮೆಟ್ಟಿದರೆ ಯುದ್ಧಕಾಲದಲ್ಲಿ ಶಸ್ತ್ರ ಸಂನ್ಯಾಸ ಮಾಡಿದ ಭೀಷ್ಮಾಚಾರ್ಯ, ದ್ರೋಣಾಚಾರ್ಯರ ಕಥೆಯಾದೀತು ನಮ್ಮದು. ದಂಡಿಸುವುದಕ್ಕೆ ಶಿಖಂಡಿಯೋ, ದೃಷ್ಟದ್ಯುಮ್ನನೋ ಸದಾ ಸಿದ್ಧರಿದ್ದಾರು.
ಕೊರೋನಾದಿಂದಾಗಿ ಜೀವನದ ಓಟಕ್ಕೆ ಸಣ್ಣದೊಂದು ಬ್ರೇಕ್ ಬಿದ್ದಿತೆಂದು ನಾವೆಂದುಕೊಂಡರೆ ಓಟ ನಿಂತದ್ದಲ್ಲ, ಓಡಬೇಕಾದ ಕ್ರಮ ಬದಲಾಗಬೇಕಿದೆ ಎಂಬ ಸೂಚನೆ ದೊರೆತದ್ದಾಗಿದೆ. ಬದಲಾದ ಓಟದಲ್ಲಿ ಇಲ್ಲಿಯವರೆಗಿನ ಸೋಲುಗೆಲುವುಗಳ ಮಾದರಿಗಳೆಲ್ಲವೂ ಬದಲಾದಾವು ಎಂಬುದಂತೂ ಸ್ಪಷ್ಟ. ಎದುರಿಗಿರುವ ಶೈಕ್ಷಣಿಕ ವರ್ಷ ಮಕ್ಕಳ ಕಲಿಕೆಯ ಕ್ರಮವನ್ನೂ ಶಿಕ್ಷಕರ ಬೋಧನಾ ಕ್ರಮವನ್ನೂ ಖಂಡಿತವಾಗಿಯೂ ಪಲ್ಲಟಗೊಳಿಸುತ್ತದೆ. ಡಾರ್ವಿನ್ನನ ’ಸಮರ್ಥನಾದವನು ಉಳಿಯುತ್ತಾನೆ’ ಎಂಬ ಸಿದ್ಧಾಂತ ಇಲ್ಲಿಗೂ ಅಕ್ಷರಶಃ ಅನ್ವಯಿಸಲಿದೆ. ಆದರೆ ತನ್ನ ಅಧ್ಯಯನದ ಕ್ಷೇತ್ರದಲ್ಲಿ ಬಹುಸಮರ್ಥನೆಂದು ಗುರುತಿಸಿಕೊಂಡವನೂ ತಂತ್ರಜ್ಞಾನದ ಸೂಕ್ತಬಳಕೆಯಲ್ಲಿ ದುರ್ಬಲನಾದರೆ ಅದರಿಂದಾಗುವ ನಷ್ಟ ಆ ಗುರುಗಳ ಶಿಷ್ಯರಾಗಬೇಕಿದ್ದವರಿಗೆ, ತನ್ಮೂಲಕ ಗುರುಗಳ ಜ್ಞಾನವನ್ನು ದಕ್ಕಿಸಿಕೊಳ್ಳಲಾಗದೇ ಹೋಗುವವರಿಗೆ.
ಕೊರೋನಾ ನಿರೀಕ್ಷೆಗೂ ಮೀರಿದ ಖೋ ಕೊಟ್ಟಿದೆ. ಶಿಕ್ಷಕರೀಗ ಓಡದಿದ್ದರೆ ಮುಗ್ಗರಿಸಿಯಾರೆಂಬ ಭಯವೂ ಇದೆ. ಆದರೆ ಕಳಕಳಿಯಿಷ್ಟೇ. ಜ್ಞಾನದ ದೃಷ್ಟಿಯಿಂದ ಎತ್ತರದಲ್ಲಿರುವ ಉಪನ್ಯಾಸಕನೊಬ್ಬನನ್ನು ತಂತ್ರಜ್ಞಾನದ ನೋಟ ಕೆಳಗಿಳಿಸದಿರಲಿ. ಅವರಲ್ಲಿನ ಆತ್ಮವಿಶ್ವಾಸ ಕುಗ್ಗದೇ ಇರಲಿ. ಇಡಿಯ ಶಿಕ್ಷಣಕ್ಷೇತ್ರದ ಭವಿಷ್ಯವೀಗ ಜ್ಞಾನ-ತಂತ್ರಜ್ಞಾನಗಳ ನಡುವೆ ಸಿಕ್ಕಿಕೊಂಡಿದೆ. ಅದು ಶಿಕ್ಷಕರಿಗೆ ಅಡಕತ್ತರಿಯಾಗದಂತೆ ಕಾಪಾಡಿಕೊಳ್ಳುವುದು ಸಮಾಜದ ಬದ್ಧತೆಯಾಗಿದೆ.
-ಆರತಿ ಪಟ್ರಮೆ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ