ಪೇಟೆ ಮನೆಗಳ ಗ್ಯಾಸ್ ಪುರಾಣವು...
ಗ್ಯಾಸ್ ಸಿಲಿಂಡರುಗಳೆಲ್ಲ ಒಂದಕ್ಕೊಂದು ತಾಂಟಿಕೊಂಡು ಠೇಂಕರಿಸುತ್ತಾ ದೂರದಲ್ಲೆಲ್ಲೋ ಪಿಕಪ್ ಟೆಂಪೋ ವೊಯ್ಯನೆ ಬರುವಾಗ ಮನೆಯೊಡತಿಯ ಮನದಲ್ಲಿ ಹೇಳತೀರದ ಸಂಭ್ರಮ. ಹ್ಞಾಂ... ಇವತ್ತಂತೂ ಖಂಡಿತ ನಮ್ಮ ಮನೆಗೆ. ಬುಕ್ಕು ಮಾಡಿ ದಿನ ಹತ್ತಾಯ್ತು. ಯಾವಾಗಲೂ ಎಂಟು ದಿನಕ್ಕೇ ತರ್ತಾರವ್ರು. ಈ ಸರ್ತಿ ಏನಾಯ್ತೋ, ಸಿಕ್ಕಾಪಟ್ಟೆ ಲೇಟು... ಯೋಚನೆಗಳು ತಲೆಯೊಳಗೆ ಸರಸರ... ಆ ಟೆಂಪೋ ಸಿಲಿಂಡರಿನ ಅದೇ ಸದ್ದಿನೊಂದಿಗೆ ಗೇಟಿನೆದುರಿಂದ ಪಾಸಾಗಿ ಬೇರೊಂದು ಮನೆಯೆದುರು ನಿಲ್ಲಬೇಕಾದರೆ ಈಕೆಗೋ ಅಸಾಧ್ಯ ನಿರಾಸೆ. ಉಸಿರಿಗಾಗಿ ಹಂಬಲಿಸುತ್ತಿದ್ದವನಿಗೆ ಆಮ್ಲಜನಕ ತುಂಬಿದ ಸಿಲಿಂಡರನ್ನು ದೂರದಿಂದ ತೋರಿಸಿ ಹಾಗೆಯೇ ಮರೆಯಾಗಿಸಿದರೆ ಎಂತಹ ನಿರಾಸೆಯಾಗಬಹುದೋ ಆ ಬಗೆಯದೇ ಬೇಜಾರು. ದೇವರೇ... ಈಗಿರುವ ಹಂಡೆ ಇನ್ನೆರಡು ದಿನಕ್ಕಾದರೂ ಬರಲಿ ಎಂಬ ಪ್ರಾರ್ಥನೆ. ಕಣ್ಣುಗಳು ಅಪ್ರಯತ್ನವಾಗಿ ದೇವರ ಫೋಟೋ ನೋಡುತ್ತವೆ.
"ನಿಮಗೆ ಏನು, ಅಡುಗೆ ಮಾಡಬೇಕಾದರೆ ಒಲೆ ಉರಿಸಬೇಕಾದ ತಾಪತ್ರಯವೇ ಇಲ್ಲ. ಸ್ಟವ್ ಆನ್ ಮಾಡಿ ಲೈಟರ್‌ನಲ್ಲಿ ಟಕ್ ಮಾಡಿದ್ರಾಯ್ತು. ನಮ್ಮ ಹಾಗೆ ಮಡಲು, ಕಟ್ಟಿಗೆ ಅಂತೆಲ್ಲ ಒದ್ದಾಡಬೇಕಿಲ್ಲ. ಎಷ್ಟು ಲಾಯಕ್ಕು! ನಮ್ಮ ಅವಸ್ಥೆ ಮಳೆಗಾಲದಲ್ಲಂತೂ ಕೇಳುದೇ ಬೇಡ. ಸೌದೆ ಓಶಿದಲ್ಲೇ ಧೋ ಅಂತ ಮಳೆ ನೀರು ಸೋರಿ ಕಟ್ಟಿಗೆ ಪೂರಾ ಒದ್ದೆಯಾಗಿ... ಥೋ... ಜೀವಮಾನ ಪೂರಾ ಒಲೆ ಉರಿಸುವುದರಲ್ಲೇ ಕಳೆಯಿತೋ ಅನ್ನಿಸ್ತದೆ ಮಾರಾಯ್ತಿ. ಆ ಹೊಗೆ, ಕಣ್ಣುರಿ, ಕೆಮ್ಮು, ಯಾರಿಗೆ ಬೇಕು? ಕಟ್ಟಿಗೆ ತರಲು ಕೆಲಸಕ್ಕೆ ಜನ ಸಿಗದ ಭಾಗ್ಯಕ್ಕೆ ನಾವೇ ಅಡರು ಹೆಕ್ಕಿ ತಂದು ಒಲೆ ಉರಿಸುವುದೂ ಉಂಟು. ಅಡಕೆ ಸಿಪ್ಪೆ, ಕಾಯಿಸಿಪ್ಪೆ ಹೇಗೂ ಉಂಟಲ್ಲ ಬಿಸಿನೀರಿಗೆ" ಅಂತ ಪಟಪಟನೆ ವಟಗುಟ್ಟುತ್ತಾರೆ ಪದ್ಮಕ್ಕ. ಅವರಿಗೋ ಎಡಗೈಯಲ್ಲಿ ಸ್ಟೌವಿನ ನಾಬ್ ತಿರುಗಿಸಿ ಬಲಗೈಯಲ್ಲಿ ಲೈಟರಿನ ಒತ್ತುಗುಂಡಿ ಅದುಮಿದ ತಕ್ಷಣ ಪಾತ್ರೆಗೆ ಒಂಚೂರೂ ಮಸಿಲೇಪನವಾಗದ ಹಾಗೆ ನೀಲವರ್ಣದಿಂದ ಸದ್ದಿಲ್ಲದೇ ಉರಿಯುವ ಎಲ್‌ಪಿಜಿ ಮೇಲೆ ಅದೆಂಥದೋ ವಿಚಿತ್ರ ಮೋಹ.
ಆದರೆ ಪಟ್ಟಣದವರ ಕಥೆ ಪಟ್ಟಣದವರಿಗೇ ಪ್ರೀತಿ. "ಪೇಟೆಯಲ್ಲಿ ಕೂತವರ ಅವಸ್ಥೆ ಮಾರಾಯ್ತಿ, ಅಲ್ಲ, ಒಂದು ಹಂಡೆ ಅಡುಗೆಗೆ, ಇನ್ನೊಂದು ಬಿಸಿನೀರಿಗೆ ಅಂತ ಮಾಡಿಕೊಂಡು ಎರಡೂ ಸಿಲಿಂಡರ್ ಒಟ್ಟಿಗೇ ಮುಗಿಯಿತು ಅಂತಾದ್ರೆ ಗತಿ ಗೋವಿಂದ. ಅರ್ಧಂಬರ್ಧ ಬೆಂದದ್ದನ್ನೇ ತಿನ್ನಬೇಕಷ್ಟೇ ಮತ್ತೆ. ಸಾಲದ್ದಕ್ಕೆ ಈಗೆಲ್ಲ ನಾಲ್ಕು ಬರ್ನರಿನ ಸ್ಟೌ ಬೇರೆ. ಒಂದ್ರಲ್ಲಿ ಸಾಂಬಾರಿಗೆ ತರಕಾರಿ. ಮತ್ತೊಂದ್ರಲ್ಲಿ ಹಾಲು. ಇನ್ನೊಂದ್ರಲ್ಲಿ ಅನ್ನ. ಮಗದೊಂದ್ರಲ್ಲಿ ಪಲ್ಯ ಅಂತ ನಾಲ್ಕೂ ಬರ್ನರ್ ಆನ್ ಮಾಡಿ ಇಟ್ಟುಬಿಡ್ತಾರೆ. ಅಷ್ಟೊತ್ತಿಗೆ ಗ್ಯಾಸ್ ಮುಗಿದರೆ ನಾಲ್ಕು ಬಗೆಗೂ ತ್ರಿಶಂಕು ಸ್ಥಿತಿ. ಪಕ್ಕದ ಮನೆಯವ್ರಲ್ಲಿಅಷ್ಟನ್ನೂ ಬೇಯಿಸಿಕೊಡಿ ಅಂತ ಕೇಳ್ಳಿಕ್ಕಾಗ್ತದಾ? ಒಂದೊಂದನ್ನೂ ಒಂದೊಂದು ಮನೆಗೆ ಕೊಂಡುಹೋಗಿ ಬೇಯಿಸಿ, ಕುದಿಸಿ ತರ್ಬೇಕು. ಫಜೀತಿಯೇ. ಇದರ ಬದಲು ನಮ್ಮ ಕಟ್ಟಿಗೆ ಒಲೆಯೇ ವಾಸಿ" ಅಂತ ವಾದ ಮುಂದಿಡುತ್ತಾರೆ ದೊಡ್ಡತ್ತೆ.
ಇದು ಪೇಟೆಯ ಗ್ಯಾಸ್ ಪುರಾಣ. ನೀರು ನೆರಳಿಲ್ಲದೆಯೂ ಬದುಕಬಹುದು, ಆದರೆ ಗ್ಯಾಸಿಲ್ಲದೆ ಬದುಕೋದುಂಟಾ ಎಂಬುದು ನಗರವಾಸಿಗಳ ಪರ್ಮನೆಂಟ್ ಪ್ರಶ್ನೆ. ಈಗಂತೂ ಗ್ಯಾಸ್ ಬುಕ್ ಮಾಡಬೇಕಾದರೆ ಇಪ್ಪತ್ತೊಂದು ದಿನ ಕಳೀಬೇಕು. ಬುಕ್ ಮಾಡಿ ಅಷ್ಟು ದಿನ ಕಾಯುವ ವ್ರತ ಹಾಗಿರಲಿ, ಬುಕ್ ಮಾಡುವುದೇ ಒಂದು ದೊಡ್ಡ ತಲೆನೋವು. ನೀವು ಕರೆ ಮಾಡಿರುವ ಚಂದಾದಾರರು ಇನ್ನೊಂದು ಕರೆಯಲ್ಲಿ ನಿರತರಾಗಿದ್ದಾರೆ! ಬೆಳಗಿನಿಂದ ರಾತ್ರಿವರೆಗೂ ಅದೇ ರಾಗ ಅದೇ ಹಾಡು. ಗ್ಯಾಸ್ ಬುಕ್ ಮಾಡಲು ಶಪಥ ಮಾಡಿದವರದ್ದು ನಾಯಿಪಾಡು. ಗ್ಯಾಸ್ ಏಜೆನ್ಸಿಯವರೇನು ಇಪ್ಪತ್ನಾಲ್ಕು ಗಂಟೆಯೂ ಫೋನ್ ಇಡದೇ ಮಾತಾಡುತ್ತಿರುತ್ತಾರೋ ಎಂಬುದು ಇವರ ಅನುಮಾನ. ಆದರೂ ಈಗ ಕೆಲವೆಡೆ ಎಸ್‌ಎಂಎಸ್ ಬುಕಿಂಗ್ ಶುರುವಾಗಿದೆ ಎಂಬುದು ಕೊಂಚ ಸಮಾಧಾನ ತರುವ ಮಾತು.
"ಎರಡು ಹಂಡೆ ಇದ್ರೂ ಸಾಕಾಗುದಿಲ್ಲ ಕೆಲವು ಸರ್ತಿ. ಊರಿಂದ ನೆಂಟರಿಷ್ಟರೆಲ್ಲ ಬರುವಾಗ ತರಹೇವಾರಿ ಅಡುಗೆ ಮಾಡದೇ ಇರ್ಲಿಕ್ಕಾಗ್ತದಾ? ಪಕ್ಕದ ಮನೆಯವ್ರದ್ದೂ ಇದೇ ಗ್ಯಾಸ್ ಆದರೆ ಹೇಗೋ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿಕ್ಕಾಗ್ತದೆ. ಅದೂ ಸಾಧ್ಯವಿಲ್ಲಾಂತಾದ್ರೆ ಭಾರೀ ತಾಪತ್ರಯ ಮಾರ್ರೆ... ಗ್ಯಾಸ್ ಕೈ ಕೊಡುವುದೂ ನಾವು ತೀರಾ ಅರ್ಜೆಂಟಿನಲ್ಲಿ ಇರುವಾಗ್ಲೇ. ಬೆಳಗ್ಗೆ ಗಡಿಬಿಡಿಯಲ್ಲಿ ಮನೆಗೆಲಸ ಮುಗಿಸಿ ಆಫೀಸಿಗೆ ತಯಾರಾಗ್ಬೇಕು ಅಂದರೆ ಗ್ಯಾಸ್ ಖಾಲಿ. ಮತ್ತೆ ಆ ದಿನ ಮನೆಯ ಸರ್ವಸದಸ್ಯರಿಗೂ ಹೋಟೆಲ್ ಊಟವೋ ಬ್ರೆಡ್ಡೋ ಗತಿ. ಮನೆಗೇ ಯಾರನ್ನಾದ್ರೂ ನೆಂಟರನ್ನೋ ಸ್ನೇಹಿತರನ್ನೋ ಕರೆದೆವು ಅಂತಿಟ್ಕೊಳ್ಳಿ. ಆ ದಿವಸಕ್ಕೆ ಸರಿಯಾಗಿ ಗ್ಯಾಸ್ ಹಂಡೆ ಕೂಡಾ ಖಾಲಿಯಾಗಿ ಲೊಟ್ಟೆ ಹೊಡೆಯುತ್ತಿರುತ್ತದೆ," ಎಂಬುದು ಬಹುಜನರ ಕಂಪ್ಲೇಂಟು. ಹೀಗಾಗಿ ಡಬಲ್ ಸಿಲಿಂಡರ್ ಮಾಲೀಕರೂ "ಇರಲಿ ಬೇಕಾಗುತ್ತೆ" ಅಂತ ಒಂದು ವಿದ್ಯುತ್ ಒಲೆ ಖರೀದಿಸಿಡುವುದು ಪೇಟೆಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಹಾಗಂತ ಗ್ಯಾಸ್ ಕೈಕೊಟ್ಟಿರುವ ಹೊತ್ತೇ ಕರೆಂಟೂ ಕೈಕೊಡಬಾರದು ಎಂಬ ನಿಯಮವೇನೂ ಇಲ್ಲವಲ್ಲ!
ಗ್ಯಾಸೆಂಬೋ ಈ ಗ್ಯಾಸಿನ ಸೆಲೆ ಬೆಲೆ ಎರಡೂ ತಿಳಿಯದವರು ಕೆಲವೊಮ್ಮೆ ಸ್ಟೌ ಆನ್ ಇಟ್ಟು ಆ ಬಳಿಕ ಬೇಕಾದ ಪಾತ್ರೆ ಪಗಡಿ ನೀರು ಅಂತ ಹುಡುಕಾಡತೊಡಗಿದರೆ ಮನೆ ಯಜಮಾನ ಕೊಂಚ ಕಂಗಾಲು. ಕಿಸೆಯೊಳಗಿನ ನೋಟುಗಳೇ ಗ್ಯಾಸಿನ ರೂಪದಲ್ಲಿ ಧಗಧಗನೆ ಹೊತ್ತಿ ಉರಿಯುವುದು ಅವನಿಗಷ್ಟೇ ಗೊತ್ತು. ಕೆಲವು ಮನೆಗಳಲ್ಲಂತೂ ಒಂದು ಹಂಡೆ ಎರಡು ತಿಂಗಳಿಗಾದರೂ ಬರಲೇಬೇಕೆಂಬ ಅಲಿಖಿತ ನಿಯಮ. ಸಾಲದ್ದಕ್ಕೆ ಸರ್ಕಾರ ಕೂಡಾ ಒಂದು ಹಂಡೆಯನ್ನು ಒಂದೂವರೆ ತಿಂಗಳಿನುದ್ದಕ್ಕೂ ಹೇಗಾದ್ರೂ ಅಡ್ಜಸ್ಟ್ ಮಾಡ್ಕೊಳ್ಳಲೇಬೇಕೆಂದು ತಾಕೀತು ಬೇರೆ ಮಾಡಿದೆ. ಅಂಥಾದ್ರಲ್ಲಿ ಒಂದು ಸಿಲಿಂಡರು ಇಪ್ಪತ್ತು ದಿನಕ್ಕೂ ಬಾರದೆ ಹೋದರೆ ಮನೆಯೊಳಗೆ ಒಂದು ದಿನದ ಜಗಳಕ್ಕೆ ಟಾಪಿಕ್ಕು ಫ್ರೀಯಾಗಿ ಹುಟ್ಟಿಕೊಳ್ಳುತ್ತದೆ. ಗಂಡ ಹೆಂಡತಿಗೆ ಬಯ್ದರೆ "ನಾನೇನು ನನಗೊಬ್ಳಿಗೇ ಆಡುಗೆ ಮಾಡಿದ್ನಾ... ಮನೆಯಲ್ಲಿದ್ದರಂತೂ ಗಂಟೆಗೆರಡು ಸಲ ಎಂಬ ಹಾಗೆ ನಿಮ್ಗೆ ಕಾಫಿ ಚಾ ಬೇಕೇ ಬೇಕು..." ಅಂತ ಹೆಂಡತಿ ರೇಗಲಿಕ್ಕಾಯ್ತು. ಸಾಲದ್ದಕ್ಕೆ ಮಕ್ಕಳಿಗೂ ಬಯ್ಗುಳದಲ್ಲಿ ಕೊಂಚ ಪಾಲು. ಟೂ ಮಿನಿಟ್ಸ್ ನೂಡಲ್ಸ್ ಅಂತ ದಿನಕ್ಕೆ ನಾಲ್ಕು ಸರ್ತಿ ಮಾಡಿ ತಿಂದು ಗ್ಯಾಸೆಲ್ಲ ಖಾಲಿ, ಇತ್ಯಾದಿ.
ನಿಜಾರೀ, ಗ್ಯಾಸ್ ತುಂಬಾ ಅಪಾಯಕಾರಿ.
- ಆರತಿ ಪಟ್ರಮೆ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ