ಹಬ್ಬಗಳ ಸಡಗರದಲ್ಲಿ ಮನಸ್ಸು ಹಗುರಾಗಲಿ!
ಪ್ರಜಾಪ್ರಗತಿ
| 17 ಆಗಸ್ಟ್ 2020
‘ರಾಜ್ಯದ ಎಲ್ಲ ಪ್ರಜೆಗಳೂ ಸುಖ ಸಮೃದ್ಧಿಗಳನ್ನು ಅನುಭವಿಸುತ್ತಿದ್ದಾರೆ. ಅವರಿಗೆ ಯಾವ ಭೀತಿಯಾಗಲೀ, ನೋವಾಗಲೀ ಇಲ್ಲ. ಹಾಗಿದ್ದರೂ ಅವರು ಮನದಾಳದಲ್ಲಿ ಸಂತೋಷವಾಗಿಲ್ಲ. ಏಕೆಂದರೆ ರಾಜ್ಯದಲ್ಲಿ ಇತ್ತೀಚೆಗೆ ಯಾವುದೇ ಸಂಭ್ರಮವಾಗಲೀ, ಉತ್ಸವಗಳಾಗಲೀ ನಡೆದಿಲ್ಲ. ಜನರು ಒಂದು ಬಗೆಯ ಆಲಸ್ಯದಿಂದ ಬಳಲಿದ್ದಾರೆ. ಇದನ್ನು ನಿವಾರಿಸುವುದೂ ಕೂಡಾ ರಾಜನ ಕರ್ತವ್ಯವೇ ಆಗುತ್ತದೆ’ ಶ್ರೀರಾಮನ ಜನ್ಮದಿನದಂದು ಅವನಿಗೆ ಶುಭಾಶಯ ಹೇಳಿ ಮಂತ್ರಿಯಾದ ಸುಮಂತ್ರ ಹೇಳುವ ಮಾತುಗಳಿವು. ಅದಕ್ಕಾಗಿ ಶ್ರೀರಾಮ ರಾಜಸೂಯ ಯಾಗ ಮಾಡುವುದೆಂದು ಯೋಚಿಸಿದಾಗ ಅದು ಸೂಕ್ತವಲ್ಲ ಎಂದ ಭರತ ಲಕ್ಷ್ಮಣರು ಅಶ್ವಮೇಧ ಒಳಿತೆಂದು ಸೂಚಿಸುತ್ತಾರೆ. ಶ್ರೀರಾಮ ಸಂಕಲ್ಪ ಮಾಡುತ್ತಾನೆ. ಮುಂದೆ ಇದೇ ನೆಪವಾಗಿ ಲವಕುಶರನ್ನು ಕಾಣುವಂತಾಗುತ್ತದೆ ಎಂಬುದೆಲ್ಲ ಇತಿಹಾಸ.
ಹಾಗೆ ನೋಡಿದರೆ ಮನೆಮನೆಯ ಕತೆಯೂ ಅದೇ ಅಲ್ಲವೇ? ಎಲ್ಲವೂ ಇದೆ, ಮನಸ್ಸಿನಲ್ಲೇನೋ ಖಾಲಿತನ ಎಂಬುದು ಸಹಜವೇ. ಅದಕ್ಕಾಗಿಯೇ ಆಗೀಗ ಹಬ್ಬ ಹರಿದಿನಗಳ ಆಚರಣೆ. ಶ್ರಾವಣ ಮಾಸ ಬಂತೆಂದರೆ ಸಾಕು, ಮನೆಯೊಳಗಿನ ಸಡಗರ ಕೇಳಬೇಕೇ? ಆಶಾಢದ ಜಡವೆಲ್ಲ ತೊಲಗಿ ಹೊಸಹುಮ್ಮಸ್ಸಿನೊಂದಿಗೆ ಜನ ಅಣಿಯಾಗುತ್ತಾರೆ. ಭೀಮನ ಅಮವಾಸ್ಯೆ ಕಳೆದು ನಾಗರ ಪಂಚಮಿ, ವರಮಹಾ¯ಕ್ಷ್ಮೀ ವ್ರತ..ಇನ್ನೇನು ಗೌರಿ ಗಣೇಶ ಹಬ್ಬಕ್ಕೆ ದಿನಗಳು ದೂರವಿಲ್ಲ. ಕೊರೋನಾ ಇರಲಿ, ಇನ್ನೇನೇ ಆಗಲಿ ನಮ್ಮ ಜನರು ಎಲ್ಲವನ್ನೂ ಧಿಕ್ಕರಿಸಿ, ರೋಗದ ಭೀತಿಯನ್ನೂ ಕೊಡವಿ ಚುರುಕಾಗುತ್ತಾರೆ. ಹೆಣ್ಣುಮಕ್ಕಳಿಗೆ ಹಬ್ಬವೆಂದರೆ ಒಂದು ಮುಷ್ಠಿ ಪ್ರೀತಿ ಜಾಸ್ತಿಯೇ ಅನಿಸುತ್ತದೆ. ಕವಾಟಿನಲ್ಲಿದ್ದ ರೇಷ್ಮೆ ಸೀರೆಗಳು ಒಮ್ಮೆ ಹೊರಬಂದು ಹಾಗೇ ನಗುತ್ತವೆ. ಮನೆಯೊಳಗೇ ಇರುವುದಾದರೂ ನಮ್ಮ ಮಹಿಳೆಯರಿಗೆ ಮೈತುಂಬಾ ಆಭರಣಗಳನ್ನು ಧರಿಸಿಕೊಂಡು ಓಡಾಡುವುದೆಂದರೆ ಸಂಭ್ರಮವೇ ಸರಿ. ಅವರನ್ನು ನೋಡುವುದರಲ್ಲೂ ಒಂದು ಸೊಗಸಿದೆಯಲ್ಲ!
ನಾವು ತುಮಕೂರಿಗೆ ಬಂದ ಹೊಸದರಲ್ಲಿ ಇಲ್ಲಿಯ ಹಬ್ಬಗಳ ಅಬ್ಬರಕ್ಕೆ ಬೆರಗಾಗಿ ಹೋಗಿದ್ದೆ. ಅನೇಕ ಹಬ್ಬಗಳ ಆಚರಣೆಯಂತೂ ನನಗೆ ಕೇಳಿಯೂ ಗೊತ್ತಿಲ್ಲದ್ದು. ಮನೆಮನೆಗಳಲ್ಲೂ ದೇವರನ್ನು ಕೂರಿಸಿ, ಬಾಳೆಕಂದಿನಿಂದ ಮೊದಲುಗೊಂಡು, ದೇವಿಗೆ ಸೀರೆಯುಡಿಸಿ, ಒಡವೆಗಳಿಂದ ಅಲಂಕರಿಸಿ ಹತ್ತಾರು ಬಗೆಯ ಖಾದ್ಯಗಳನ್ನು ದೇವರ ಎದುರಿಗಿಟ್ಟು, ಮನೆಯಲ್ಲಿರುವ ಬೆಳ್ಳಿದೀಪಗಳೆಲ್ಲವನ್ನೂ ಬೆಳಗಿಸಿ ಆನಂದಿಸುವ ಪರಿಯನ್ನು ನೋಡಿ ದಂಗಾಗಿಬಿಟ್ಟಿದ್ದೆ. ನಮ್ಮ ಬಾಲ್ಯದಿಂದಲೂ ನಮಗೆ ಹಬ್ಬವೆಂದರೆ ಮಾಮೂಲು ಅಡುಗೆ ಜತೆಗೆ ಹೆಚ್ಚುವರಿಯಾಗಿ ಒಂದು ಬಗೆ ಪಾಯಸವೋ ಅಥವಾ ಸಿಹಿತಿನಿಸೋ ಮಾಡಿ ದೇವರಿಗೆ ನೈವೇದ್ಯ ಮಾಡಿದರೆ ಮುಗಿಯಿತು. ಹೊಸಬಟ್ಟೆ ಧರಿಸುವುದೇನಿದ್ದರೂ ಎಲ್ಲಾದರೂ ನೆಂಟರ ಮನೆಗೆ ಹೋಗುವುದಿದ್ದರೆ ಮಾತ್ರ. ಅಥವಾ ಅಕ್ಕಪಕ್ಕದ ಮನೆಗಳಲ್ಲಿ ವಿಶೇಷವಾಗಿ ಪೂಜಾ ಕಾರ್ಯಕ್ರಮಗಳಿಗೆ ಹೋಗುವುದಿದ್ದರೆ ಮಾತ್ರ. ಇಲ್ಲಿ ಹಬ್ಬವೆಂದು ಮನೆಯಲ್ಲಿ ರೇಷ್ಮೆ ಸೀರೆಯುಟ್ಟು ಮೆರೆಯುವ ಸ್ತ್ರೀಯರನ್ನು ಕಂಡಾಗ ನಿಜಕ್ಕೂ ಅಚ್ಚರಿಯಾಗಿತ್ತು. ಜತೆಯಲ್ಲಿ ಸಮಸ್ಯೆಯೆಂದರೆ ಇವುಗಳ ಆಚರಣೆ ನಮಗೆ ಮೊದಲಿನಿಂದಲೂ ಗೊತ್ತಿಲ್ಲವಾಗಿ ಹೊಸದಾಗಿ ಶುರು ಮಾಡುವುದು ಹೇಗೆಂಬ ಯೋಚನೆ. ಕ್ರಮದಲ್ಲಿ ಏನಾದರೂ ವ್ಯತ್ಯಾಸವಾಗಿ ತೊಂದರೆಯಾದರೆ ಎಂಬ ಚಿಂತೆ ಬೇರೆ. ಹಾಗಾಗಿ ಊರೆಲ್ಲ ಹಬ್ಬ ಮಾಡುತ್ತಿದ್ದರೂ ಎಲ್ಲರ ಸಂಭ್ರಮಗಳನ್ನು ದೂರದಿಂದ ಕಂಡು ಆನಂದಿಸುವುದೇ ನಮಗೆ ಹೆಚ್ಚು ಆರಾಮವೆನಿಸಿದೆ. ‘ನೀವು ಹೇಗೂ ಹಬ್ಬ ಮಾಡಲ್ಲ ಅಲ್ವಾ? ಊಟಕ್ಕೆ ನಮ್ಮ ಮನೆಗೇ ಬಂದುಬಿಡಿ’ ಎಂಬ ಆತ್ಮೀಯರ ಮಾತಿಗಿಂತ ಆಪ್ಯಾಯಮಾನವಿನ್ನೇನಿದೆ? ಅಷ್ಟೇ ಅಲ್ಲದೇ ದಿನನಿತ್ಯ ನಮ್ಮದೇ ಕೈಯಡುಗೆ ಉಂಡು ಬೇಸರ ಬಂದಿರುವಾಗ ಇಂತಹ ಕರೆಗಳು ಬಹಳ ಮಧುರವೆನಿಸುತ್ತವೆ. ಬಹುಶಃ ಮಕ್ಕಳೂ ಕೂಡಾ ಇಂತಹ ಕರೆಗಳಿಗೆ ಮೌನವಾಗಿ ಕಾದಿರುತ್ತಾರೆ ಅನಿಸುತ್ತದೆ. ಇಂಥವರು ಕರೆದಿದ್ದಾರೆ ಎಂದ ತಕ್ಷಣ ಕುಣಿದಾಡುವುದು ಅವರೇ. ಸದ್ಯ ಇವತ್ತೊಂದಿನ ಆದರೂ ಹೊಸರುಚಿಯ ಭಾಗ್ಯ! ಎಂಬುದು ಅವರ ಅಂಬೋಣ. ಹೇಳಿ, ರಾಮರಾಜ್ಯದ ಪ್ರಜೆಗಳಿಗೂ ಈ ಮಕ್ಕಳಿಗೂ ಏನಾದರೂ ವ್ಯತ್ಯಾಸವಿದೆಯೇ!
ಕಷ್ಟವಾಗುವುದು ಮಕ್ಕಳ ಕೆಲವು ಪ್ರಶ್ನೆಗಳಿಗೆ ಉತ್ತರಿಸುವುದು. ‘ಎಲ್ಲರ ಮನೆಯಲ್ಲಿ ಹಬ್ಬ ಮಾಡ್ತಾರೆ, ನಮ್ಮಲ್ಲಿ ಯಾಕಿಲ್ಲ’? ನಮ್ಮ ಫ್ರೆಂಡ್ಸ್ ಎಲ್ಲ ಹೊಸಬಟ್ಟೆ ತಗೊಂಡಿದ್ದಾರೆ, ನಮಗೆ ಯಾಕಿಲ್ಲ? ಈಗಿನ್ನೂ ಮೊನ್ನೆ ಮೊನ್ನೆ ಕೊಂಡುಕೊಂಡಿದ್ದೆವಲ್ಲ ಅಂದರೆ ‘ಅದು ಬರ್ತಡೇಗಾಯ್ತು, ಹಬ್ಬಕ್ಕೆ?’ ಎಂಬ ಬಾಣ ಸುಯ್ಯನೇ ಹೊಮ್ಮುತ್ತದೆ. ನಮಗಾದರೋ ವರ್ಷಕ್ಕೊಂದೇ ಪ್ರತಿ ಹೊಸಬಟ್ಟೆ ಕೊಡಿಸುತ್ತಿದ್ದುದು. ಶಾಲೆಗೆಂದು ಯುನಿಫಾರ್ಮ್ ಇಲ್ಲ. ಅಕ್ಕಂದಿರ ಬಟ್ಟೆ ಅವರಿಗೆ ಚಿಕ್ಕದಾದಂತೆ ನಮಗೆ ಕಿರಿಯರಿಗೆ. ಈ ಮಕ್ಕಳಿಗೆ ಆ ವಿಷಯ ಅರ್ಥವೇ ಆಗದ್ದು. ಅಷ್ಟೊಂದು ಬಡತನ ಇತ್ತಾ ಎಂದರೆ ಅದು ಬಡತನವಲ್ಲ, ವಸ್ತುಗಳ ಸದ್ವಿನಿಯೋಗವಾಗುತ್ತಿದ್ದ ರೀತಿ ಎಂದರೆ ಇವರಿಗೆ ತಿಳಿಯದು. ಈಗೇನಿದ್ದರೂ ವರ್ಷಕ್ಕೆ ನಾಲ್ಕು ಪ್ರತಿಯಾದರೂ ಹೊಸಬಟ್ಟೆ ಬೇಕು. ಮತ್ತೆ ಹಬ್ಬಗಳೆಂದರೆ ಸುಮ್ಮನೆಯೇ?
ಬಹುಶಃ ಸುಮಂತ್ರನೆಂದಂತೆ ಜನ ಉಲ್ಲಸಿತರಾಗಿರಬೇಕಾದರೆ ಏನಾದರೂ ಆಚರಣೆಗಳಿರಬೇಕು ಎಂಬುದಕ್ಕಾಗಿಯೇ ಇಷ್ಟೊಂದು ಹಬ್ಬಗಳನ್ನು ಆಚರಿಸುತ್ತೇವೆಯೋ ಏನೋ. ಆ ಮೂಲಕ ಬಂಧುಬಾಂಧವರ ಒಡನಾಟವೂ ನಿರಂತರವಾಗಿ ಒದಗಿದಂತಾಗುತ್ತದೆ. ಮನೆಮನೆಗಳ ನಡುವೆ ಕುಂಕುಮ, ತಾಂಬೂಲ, ಸಿಹಿತಿಂಡಿ ಹಂಚಿಕೆಯೆಂದು ಉತ್ತಮ ಬಾಂಧವ್ಯ ರೂಪುಗೊಳ್ಳುತ್ತದೆ. ಹಬ್ಬದ ಹೆಸರಿನಲ್ಲಿ ಮನೆಯ ಮೂಲೆಮೂಲೆಯೂ ಸ್ವಚ್ಛ ಶುಭ್ರವಾಗುತ್ತದೆ. ಪರಿಣಾಮವಾಗಿ ರೋಗರುಜಿನಗಳು ದೂರವಾಗುತ್ತದೆ ಎಂಬ ಕಾರಣಕ್ಕೆ ಹಿರಿಯರು ಇಂಥವನ್ನೆಲ್ಲ ಯೋಜಿಸಿಟ್ಟರೇ ಎಂದು ಹಲವು ಬಾರಿ ಅನಿಸುವುದಿದೆ. ಮತ್ತು ಪರಸ್ಪರ ಮಾತನಾಡಲೇ ಬೇಕಾದ ಕಾರಣ ಮನೆಯೊಳಗಿನ ಹಲವು ಒಡಕುಗಳು, ಕುಟುಂಬದ ನಡುವಿನ ಹಲವು ಬಿರುಕುಗಳು ಹಬ್ಬದ, ಆಚರಣೆಗಳ ಸಲುವಾಗಿ ಸರಿಹೋಗಬಹುದು ಅಲ್ಲವೇ?
ಹಬ್ಬಗಳು ನಮಗೆ ಸಂತೋಷವಾಗಿರುವುದನ್ನು ಕಲಿಸುತ್ತವೆ; ಒಂದು ಸಂಸ್ಕøತಿಯ ಶ್ರೀಮಂತಿಕೆಯೇನೆಂಬುದನ್ನು ಅದರ ಹಬ್ಬಗಳ ಆಚರಣೆಯಲ್ಲಿ ನೋಡಬಹುದು ಎಂಬ ಚಿಂತಕರ ಮಾತು ಅಕ್ಷರಶಃ ನಿಜ. ಅಲ್ಲದೇ ಖಾದ್ಯಪ್ರಿಯರು ಹೇಳುವಂತೆ ಒಂದೊಂದು ಹಬ್ಬಕ್ಕೆ ಒಂದೊಂದು ತೆರನಾದ ಸಿಹಿ, ಖಾರಗಳ, ಅಡುಗೆಯ ವಿಶೇಷತೆಯಿರುವುದರಿಂದ ನಮ್ಮ ಜಿಹ್ವೆಗೂ ನಿಜಾರ್ಥದಲ್ಲಿ ಹಬ್ಬವೇ! ಪ್ರಸ್ತುತ ಎರಗಿದ ಸಂಕಟದಲ್ಲಿ ಎಲ್ಲ ಕುಟುಂಬಗಳೂ ಒಂದಲ್ಲ ಒಂದು ಸಂಕಷ್ಟದಲ್ಲಿವೆ, ಆತಂಕದಲ್ಲಿವೆ. ಬರುವ ಹಬ್ಬಗಳೆಲ್ಲ ಮನಸ್ಸನ್ನು ಹಗುರಗೊಳಿಸಲಿ, ಸಂಸ್ಕøತಿಯ ಶ್ರೀಮಂತಿಕೆಯನ್ನು ಮೆರೆಸಲಿ ಎಂದು ಆಶಿಸೋಣವೇ?
ಆರತಿ ಪಟ್ರಮೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ