ಬದುಕಿನ ಸಂತೃಪ್ತಿಗೆ ಸರಳತೆಯೇ ಹೂರಣ!
ಜುಲೈ 11-18ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ
ರಣಭೂಮಿಯಲ್ಲಿ ರಾಮನನ್ನು ಕಂಡು, ಅವನೊಂದಿಗೆ ಕಾದಾಡಿ ವೀರೋಚಿತ ಮರಣವನ್ನಪ್ಪಬೇಕೆಂಬ ಇಂಗಿತದಿಂದ ಬಂದವನನ್ನು ಎದುರಿಸುವುದು ಲಕ್ಷ್ಮಣ. ಅವನೇ ರಾಮನಿರಬಹುದೇ ಎಂಬ ಕೌತುಕ ಅತಿಕಾಯನಿಗೆ. ಅಂತೂ ಮನವೊಪ್ಪಿದ ದೇವರಿಗೆ ರಣಾಂಗಣದಲ್ಲಾದರೂ ಪೂಜೆ ಸಲ್ಲಿಸಬೇಕೆಂಬ ಆಶಯದಿಂದ ಅತಿಕಾಯ ಸರಳಪೂಜೆ ಸಲ್ಲಿಸುತ್ತಾನೆ. ಆ ಪೂಜೆ ಸರಳವೂ ಹೌದು, ಸರಳಿನದ್ದೂ (ಬಾಣದ್ದು) ಹೌದು. ಅತಿಕಾಯನ ಭಕ್ತಿಯ ದ್ಯೋತಕವಾದ ಆ ಬಾಣಗಳನ್ನು ಲಕ್ಷ್ಮಣ ತನ್ನ ಶರೀರದಲ್ಲಿ ಧರಿಸಿ, ಶ್ರೀರಾಮನ ಪದದಾಣೆಯಾಗಿಯೂ ನೀನು ಪರಮಭಕ್ತನಹುದು ಎಂದು ಮೆಚ್ಚಿಕೊಳ್ಳುತ್ತಾನೆ, ಅತಿಕಾಯನಿಗೆ ಅವನ ಅಪೇಕ್ಷೆಯಂತೆ ಮೋಕ್ಷವನ್ನೊದಗಿಸುತ್ತಾನೆ. ಮೂಲರಾಮಾಯಣದಲ್ಲಿ ಈ ಪ್ರಸಂಗವಿಲ್ಲದಿದ್ದರೂ ಯಕ್ಷಗಾನದಲ್ಲಿ ಇದು ಜನಮೆಚ್ಚುಗೆಯ ಕಥಾನಕ.
ಪೂಜೆಗೆ ನಿಜಕ್ಕೂ ಬೇಕಾಗಿರುವುದು ಭಗವಂತನಲ್ಲಿ ಅಚಲಭಕ್ತಿ ಮತ್ತು ಶ್ರದ್ಧೆ ಎಂಬುದನ್ನು ಸಾರುವ ಸಾವಿರಾರು ಕಥೆಗಳು ನಮ್ಮ ಪುರಾಣಗಳಲ್ಲಿ, ಇತಿಹಾಸದಲ್ಲಿವೆ. ಆಡಂಬರದ, ಸಿರಿವಂತಿಕೆಯ ಮದದ ಪೂಜೆಗೆ ಭಗವಂತನು ಒಲಿದ ನಿದರ್ಶನಗಳಿಂದಲೂ ಅನನ್ಯವಾದ ಮುಗ್ಧಭಕ್ತಿಗೆ ಒಲಿದು ಬಂದ ಉದಾಹರಣೆಗಳು ಹೆಚ್ಚು. ಮಹಾಭಾರತದಲ್ಲಿಯೂ ಕೂಡಾ ಸಂಧಾನಕ್ಕಾಗಿ ಹಸ್ತಿನಾವತಿಗೆ ಹೋದ ಕೃಷ್ಣ, ಅರಮನೆಯಲ್ಲಿ ಕೌರವ ತನಗಾಗಿ ವೈಭವೋಪೇತ ಅಡುಗೆಯನ್ನು ಮಾಡಿಸಿದ್ದರೂ ಉಣ್ಣುವುದಿಲ್ಲ. ರಾಜತಾಂತ್ರಿಕವಾದ ಕಾರಣಗಳು ಅದೇನೇ ಇದ್ದರೂ ಅವನು ಹೋಗುವುದು ದಾಸಿಪುತ್ರನಾದ ವಿದುರನ ಮನೆಗೆ. ವಿದುರನ ಆತಿಥ್ಯದಿಂದ ಭಗವಂತ ತೃಪ್ತ. ವಿದುರನಲ್ಲಿ ‘ಕುಡುತೆಯೊಂದರ ಪಾಲಿನಲಿ ಹಸಿವಡಗಿತಾ ಕ್ಷೀರಾಬ್ಧಿಶಯನಗೆ’! ಆಹಾ! ಕವಿಯ ಕಲ್ಪನೆಯೇ ಆದರೂ ಎಷ್ಟು ಅರ್ಥಪೂರ್ಣ!
ಭಾರತೀಯ ಪುರಾಣಗಳಂತೆಯೇ ನಮ್ಮ ಸಂಸ್ಕøತಿಯೂ ಕೂಡಾ ಒತ್ತುಕೊಡುವುದು ಸರಳತೆಗೆ. ನಡೆ, ನುಡಿ, ಆಚಾರವಿಚಾರಗಳು, ಹಬ್ಬ ಹರಿದಿನಗಳು ಎಲ್ಲವೂ ನೆಲೆನಿಂತಿರುವುದು ಸರಳತೆಯ ಮೌಲ್ಯದ ಮೇಲೆಯೇ. ಅಧ್ಯಯನನಿರತನಾದವನಿಗೆ ಅವನು ಗಳಿಸುವ ಜ್ಞಾನ; ಭಕ್ತಿಯ ಪಥವನ್ನು ನೆಚ್ಚಿಕೊಂಡವನಿಗೆ ತನ್ಮೂಲಕ ಒದಗುವ ಆಂತರಂಗಿಕವಾದ ಶಾಂತಿ; ಶೌರ್ಯ ಪರಾಕ್ರಮಗಳನ್ನು ನೆಚ್ಚಿಕೊಂಡವನಿಗೆ ಭೂಷಣಪ್ರಾಯವಾಗಿ ಒದಗುವ ಕೆಚ್ಚು ತುಂಬಿಕೊಡುವಷ್ಟು ಸೌಂದರ್ಯವನ್ನು ಮತ್ತಾವ ಅಲಂಕಾರಿಕ ಸಾಮಗ್ರಿಗಳೂ ತಂದುಕೊಡಲಾರವು. ಶುಭ್ರವಾದ ವಸ್ತ್ರ, ಶಿಸ್ತುಬದ್ಧ ಜೀವನ, ಮಿತವಾದ ಆಹಾರ ಎಂದೊಡನೆಯೇ ಆರೋಗ್ಯವಂತ, ಕಾಂತಿಯುತ ಬಿಂಬವೊಂದು ಮನಸ್ಸಿನಲ್ಲಿ ಮೂಡುವುದಲ್ಲ? ಆ ಬಿಂಬವು ನಮಗರಿವಿಲ್ಲದೇ ನಮ್ಮ ಗೌರವವನ್ನೂ ಪಡೆದುಕೊಂಡು ಬಿಡುತ್ತದೆ. ಅದು ಸರಳತೆಗೆ ನಮ್ಮ ಮನಸ್ಸಿನಲ್ಲಿರುವ ಗೌರವದ ದ್ಯೋತಕವಷ್ಟೇ!
ಅಂದಹಾಗೆ ಜುಲೈ 12ನ್ನು ಅಮೆರಿಕದಲ್ಲಿ ಸರಳತೆಯ ದಿನವನ್ನಾಗಿ ಆಚರಿಸಲಾಗುತ್ತದೆ. ದೈನಂದಿನ ಜೀವನದ ಒತ್ತಡ, ಮಾನಸಿಕ ಯಾತನೆಗಳಿಂದ ಹೊರಬಂದು ಸಹಜಸುಂದರ ಪರಿಸರದ ನಡುವೆ ಸಮಯ ಕಳೆಯುವುದಕ್ಕಾಗಿ ಮೀಸಲಾದ ದಿನ ಅದು. ಸದಾ ನಮ್ಮ ಸಮಯವನ್ನು ಆವರಿಸಿಕೊಳ್ಳುವ ಆಧುನಿಕ ತಂತ್ರಜ್ಞಾನದ ಹಲವು ಮುಖಗಳಾದ ಮೊಬೈಲ್, ಕಂಪ್ಯೂಟರ್‍ಗಳನ್ನೊಳಗೊಂಡಂತೆ ಎಲ್ಲವುಗಳಿಂದ ಬಿಡುವು ಮಾಡಿಕೊಂಡು ಅಂತರಂಗದೊಡನೆ ಸಂವಹಿಸುವುದಕ್ಕಾಗಿ ಇರುವ ದಿನವದು. ತನ್ನ ಜೀವನದುದ್ದಕ್ಕೂ ಸರಳತೆಯನ್ನೇ ನೆಚ್ಚಿದÀ, ಬೋಧಿಸಿದ ಅಮೆರಿಕನ್ ಚಿಂತಕ, ತತ್ವಜ್ಞಾನಿ ಹೆನ್ರಿ ಡೀವಿಡ್ ಥಾರೋನ ಗೌರವಾರ್ಥವಾಗಿ ಅವರ ಜನ್ಮದಿನವನ್ನೇ ರಾಷ್ಟ್ರೀಯ ಸರಳತೆಯ ದಿನವನ್ನಾಗಿ ಅಮೆರಿಕನ್ನರು ಆಚರಿಸುತ್ತಾರೆ. ಆಚರಣೆಯಾಗಿ ಇದು ಒಂದುದಿನದ ಕಥೆಯಾದರೂ ಅಂದು ತನ್ನ ಸುತ್ತಲಿನ ಬದುಕು ಸುಂದರವಾಗುವುದಕ್ಕೆ ಸಂಕಲ್ಪವೊಂದನ್ನು ಪ್ರತಿಯೊಬ್ಬನೂ ಕೈಗೊಳ್ಳಬೇಕು ಎಂಬುದು ಈ ಆಚರಣೆಯ ಹಿಂದಿನ ಆಶಯ.
ಭಾರತೀಯ ದೃಷ್ಟಿಕೋನದಿಂದ ನೋಡಿದರೂ ಸರಳತೆಗಿರುವ ಮಹತ್ವ ಆಡಂಬರಕ್ಕಿಲ್ಲ. ದೇಶವನ್ನಾಳಿ ಹೋದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಜೀಯವರ ಸರಳತೆ ಜಗತ್ತಿಗೆ ಮಾದರಿಯಾಗಿ ನಿಲ್ಲುವಂಥದ್ದು. ಜನಮೆಚ್ಚಿದ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಬದುಕಿನ ಪುಟಗಳನ್ನು ಅವಲೋಕಿಸಿದರೂ ಅವರು ಸರಳತೆಯನ್ನೇ ನೆಚ್ಚಿಕೊಂಡವರು. ತನ್ನ ಸ್ಥಾನದ ಕುರಿತು ಗರ್ವವನ್ನೋ ಅಹಂಕಾರವನ್ನೋ ತೋರದ ಕಾರಣದಿಂದಲೇ ಇರಬಹುದು ಇಂಥವರು ನಿಜಾರ್ಥದಲ್ಲಿ ನಾಯಕರೆನ್ನಿಸಿಕೊಳ್ಳುವುದು. ಗಾಂಧಿಜೀಯವರ ಸರಳತೆಯ ಕಥೆ ಗೊತ್ತೇ ಇದೆ. ಅವರೂ ಥಾರೋನಿಂದ ಪ್ರಭಾವಿತರಾಗಿದ್ದರು ಎಂಬುದು ಇಲ್ಲಿ ಗಮನಾರ್ಹ.
ಅಷ್ಟಕ್ಕೂ ಸರಳತೆಯೆಂದರೇನು? ಸರಳವಾಗಿಯೇ ಹೇಳುವುದಾದರೆ ನಮ್ಮ ಬೇಕುಗಳನ್ನು ಮಿತಗೊಳಿಸಿ, ನಮ್ಮಲ್ಲಿರುವುದರಲ್ಲಿ ಸಂತೋಷ ಹೊಂದುವುದು ಎನ್ನಬಹುದೇನೋ! ಸರಳತೆಯೆಂದರೆ ಸಂತೋಷ. ಸಣ್ಣಪುಟ್ಟದರಲ್ಲೂ ಅಮಿತ ಖುಷಿಯನ್ನು ಹೊಂದಬಲ್ಲ ಮನಸ್ಸನ್ನು ಹೊಂದಿರುವುದು. ನಮಗರಿವಿಲ್ಲದೆಯೇ ನಾವು ನಮ್ಮ ಅಪೇಕ್ಷೆಗಳನ್ನು ಹೆಚ್ಚಿಸಿಕೊಳ್ಳುತ್ತಾ, ಅದಕ್ಕಾಗಿ ದುಡ್ಡು ಹೊಂದಿಸುವುದರಲ್ಲಿಯೇ ಜೀವನದ ಅಮೂಲ್ಯ ಕ್ಷಣಗಳನ್ನು ವ್ಯಯಿಸುತ್ತಿದ್ದೇವಲ್ಲ? ಎಲ್ಲವೂ ನಾವೆಂದುಕೊಂಡಂತೆ ಈಡೇರಿತು ಎನ್ನುವಷ್ಟರಲ್ಲಿ ಅನುಭವಿಸಲು ಬದುಕು ಉಳಿದಿರುತ್ತದೆಯೇ ಎಂಬುದು ಪ್ರಶ್ನೆ. ಮೂರುಮಹಡಿಗಳ ಬಂಗಲೆಯಂತಹ ಮನೆ ಬೇಕು ಎಂದು ಅಪೇಕ್ಷಿಸಿದಾತ ಅದನ್ನು ಪೂರೈಸಿಕೊಳ್ಳುವಷ್ಟರಲ್ಲಿ ಮಂಡಿನೋವು ಶುರುವಾಗಿ ಮೆಟ್ಟಿಲು ಹತ್ತಲಾಗದೇ ಹೋದರೆ ಅವನ ಬದುಕಿಗೆ ಯಾವ ಸಾಥ್ರ್ಯಕ್ಯವೂ ಉಳಿಯುವುದಿಲ್ಲ. ಅದರ ಬದಲು ತನ್ನ ದುಡಿಮೆಯಲ್ಲಿ ತಾನು ಅನುಭವಿಸಬಲ್ಲಷ್ಟು, ಮನೆಯಲ್ಲಿರುವ ನಾಲ್ಕೋ ಆರೋ ಮಂದಿಗೆ ಸಾವಕಾಶ ಕುಳಿತು ಮಾತನಾಡುವಷ್ಟು ದೊಡ್ಡ ಮನೆ ಕಟ್ಟಿಸಿಕೊಂಡರೆ ನೆಮ್ಮದಿಯೂ ಅವರ ನಡುವೆ ವಿರಾಜಮಾನವಾಗುತ್ತದೆ. ಈ ಅರಿವು ನಮ್ಮದಾಗಿದ್ದಷ್ಟು ಸರಳತೆಯ ಮಹತ್ವವೂ ನಮಗೆ ತಿಳಿದಿರುತ್ತದೆ, ಬದುಕು ನಗುತ್ತಲೂ ಇರುತ್ತದೆ. ಜಾಗತೀಕರಣದ ಪ್ರಭಾವದಿಂದಲೋ ಎಂಬಂತೆ ನಮ್ಮ ಹಬ್ಬಗಳೂ ಅದ್ಧೂರಿಯಾಗಿ ಬದಲಾಗಿವೆ, ಹೆಮ್ಮಕ್ಕಳಿಗಂತೂ ಪ್ರತೀಹಬ್ಬಕ್ಕೂ ರೇಷ್ಮೆಸೀರೆ, ಒಡವೆಗಳ ಹಂಬಲ. ಪರಿಣಾಮವಾಗಿ ನಿರ್ದಿಷ್ಟ ಉದ್ದೇಶಗಳಿಗಾಗಿ ಆಚರಣೆಗೆ ಬಂದ ಹಬ್ಬಗಳು ನೆರೆಕರೆಯವರೆದುರು ಆಡಂಬರ ಪ್ರದರ್ಶಿಸುವ ಮಟ್ಟಕ್ಕೆ ಬಂದು ತಲುಪಿವೆ. ಈ ನಡುವೆ ಶ್ರದ್ಧಾಭಕ್ತಿಗಳು ಅದೆಲ್ಲಿ ಮರೆಯಾದವೋ ಎಂದು ಭಗವಂತನಿಗನ್ನಿಸದೇ ಇರದು.
ಮನುಷ್ಯನನ್ನು ಶ್ರೀಮಂತನನ್ನಾಗಿಸುವುದು ಅವನ ಹೃದಯ; ಅವನು ಏನು ಎಂಬುದರಿಂದ ಅವನ ಶ್ರೀಮಂತಿಕೆ ಪ್ರಪಂಚಕ್ಕೆ ಕಾಣಿಸುತ್ತದೆ ವಿನಾ ಅವನು ಏನನ್ನು ಹೊಂದಿದ್ದಾನೆ ಎಂಬುದರಿಂದಲ್ಲ, ಎಂದ ಚಿಂತಕರನ್ನೀಗ ನೆನೆಯಬೇಕಿದೆ, ಸರಳಪೂಜೆಗೆ!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ