ಪೋಸ್ಟ್‌ಗಳು

ಅಕ್ಟೋಬರ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪೇಟೆ ಮನೆಗಳ ಗ್ಯಾಸ್ ಪುರಾಣವು...

ಗ್ಯಾಸ್ ಸಿಲಿಂಡರುಗಳೆಲ್ಲ ಒಂದಕ್ಕೊಂದು ತಾಂಟಿಕೊಂಡು ಠೇಂಕರಿಸುತ್ತಾ ದೂರದಲ್ಲೆಲ್ಲೋ ಪಿಕಪ್ ಟೆಂಪೋ ವೊಯ್ಯನೆ ಬರುವಾಗ ಮನೆಯೊಡತಿಯ ಮನದಲ್ಲಿ ಹೇಳತೀರದ ಸಂಭ್ರಮ. ಹ್ಞಾಂ... ಇವತ್ತಂತೂ ಖಂಡಿತ ನಮ್ಮ ಮನೆಗೆ. ಬುಕ್ಕು ಮಾಡಿ ದಿನ ಹತ್ತಾಯ್ತು. ಯಾವಾಗಲೂ ಎಂಟು ದಿನಕ್ಕೇ ತರ್ತಾರವ್ರು. ಈ ಸರ್ತಿ ಏನಾಯ್ತೋ, ಸಿಕ್ಕಾಪಟ್ಟೆ ಲೇಟು... ಯೋಚನೆಗಳು ತಲೆಯೊಳಗೆ ಸರಸರ... ಆ ಟೆಂಪೋ ಸಿಲಿಂಡರಿನ ಅದೇ ಸದ್ದಿನೊಂದಿಗೆ ಗೇಟಿನೆದುರಿಂದ ಪಾಸಾಗಿ ಬೇರೊಂದು ಮನೆಯೆದುರು ನಿಲ್ಲಬೇಕಾದರೆ ಈಕೆಗೋ ಅಸಾಧ್ಯ ನಿರಾಸೆ. ಉಸಿರಿಗಾಗಿ ಹಂಬಲಿಸುತ್ತಿದ್ದವನಿಗೆ ಆಮ್ಲಜನಕ ತುಂಬಿದ ಸಿಲಿಂಡರನ್ನು ದೂರದಿಂದ ತೋರಿಸಿ ಹಾಗೆಯೇ ಮರೆಯಾಗಿಸಿದರೆ ಎಂತಹ ನಿರಾಸೆಯಾಗಬಹುದೋ ಆ ಬಗೆಯದೇ ಬೇಜಾರು. ದೇವರೇ... ಈಗಿರುವ ಹಂಡೆ ಇನ್ನೆರಡು ದಿನಕ್ಕಾದರೂ ಬರಲಿ ಎಂಬ ಪ್ರಾರ್ಥನೆ. ಕಣ್ಣುಗಳು ಅಪ್ರಯತ್ನವಾಗಿ ದೇವರ ಫೋಟೋ ನೋಡುತ್ತವೆ. "ನಿಮಗೆ ಏನು, ಅಡುಗೆ ಮಾಡಬೇಕಾದರೆ ಒಲೆ ಉರಿಸಬೇಕಾದ ತಾಪತ್ರಯವೇ ಇಲ್ಲ. ಸ್ಟವ್ ಆನ್ ಮಾಡಿ ಲೈಟರ್‌ನಲ್ಲಿ ಟಕ್ ಮಾಡಿದ್ರಾಯ್ತು. ನಮ್ಮ ಹಾಗೆ ಮಡಲು, ಕಟ್ಟಿಗೆ ಅಂತೆಲ್ಲ ಒದ್ದಾಡಬೇಕಿಲ್ಲ. ಎಷ್ಟು ಲಾಯಕ್ಕು! ನಮ್ಮ ಅವಸ್ಥೆ ಮಳೆಗಾಲದಲ್ಲಂತೂ ಕೇಳುದೇ ಬೇಡ. ಸೌದೆ ಓಶಿದಲ್ಲೇ ಧೋ ಅಂತ ಮಳೆ ನೀರು ಸೋರಿ ಕಟ್ಟಿಗೆ ಪೂರಾ ಒದ್ದೆಯಾಗಿ... ಥೋ... ಜೀವಮಾನ ಪೂರಾ ಒಲೆ ಉರಿಸುವುದರಲ್ಲೇ ಕಳೆಯಿತೋ ಅನ್ನಿಸ್ತದೆ ಮಾರಾಯ್ತಿ. ಆ ಹೊಗೆ, ಕಣ್ಣುರಿ, ಕೆಮ್ಮು, ಯಾರಿಗೆ ಬೇಕ...

ಹುಲಿ ಬಂತು ಹುಲಿ... ನವರಾತ್ರಿಯ ಹುಲಿ...!

ಶಾಲೆಗೆ ದಸರಾ ರಜೆ. ಯಾವಾಗ್ಲೂ ತಮ್ಮನ್ನೆಲ್ಲ ದಡಬಡಿಸಿ ಹೊರಡಿಸಿ, ಸ್ಕೂಲ್ ಬ್ಯಾಗು, ಬುತ್ತಿಚೀಲ, ನೀರು ಎಲ್ಲ ಕಟ್ಟಿಕೊಟ್ಟು ತಾನೂ ಗಡಿಬಿಡಿಯಲ್ಲಿ ಆಫೀಸಿಗೆ ಹೊರಡುವ ಅಮ್ಮನೂ ನಾಲ್ಕು ದಿನ ರಜೆ ಬರೆದು ಮನೆಯಲ್ಲಿದ್ದಾಳೆ. ಅಪರೂಪಕ್ಕೆ ಸಿಕ್ಕಿದ ಸ್ವಲ್ಪವೇ ಸ್ವಲ್ಪ ಪುರುಸೊತ್ತಿನಲ್ಲಿ ಮಕ್ಕಳು ಕೇಳಿದ ಸ್ವೀಟು, ಬನ್ಸು, ಗೋಳಿಬಜೆ ಅಂತೆಲ್ಲ ತಯಾರು ಮಾಡಿಕೊಟ್ಟು ಅವರ ಖುಷಿಯನ್ನು ನೋಡಿಯೇ ಮನಸ್ಸು ತುಂಬಿಸಿಕೊಳ್ಳುತ್ತಾಳೆ. ಅಪ್ಪನಿಗಾದರೂ ಅಷ್ಟೇ. ರಜೆ ಸಿಗದಿದ್ದರೂ ಏನೋ ಒಂದು ನಿರಾಳತೆ. ಸಂಜೆ ಬಂದು ಮಕ್ಕಳ ಹೋಂ ವರ್ಕ್ ಗಲಾಟೆ ಇಲ್ಲ. ವರ್ಕಿಂಗ್ ಹೆಂಡತಿಯೂ ಎಂದಿನಂತೆ ಸಿಡುಕುತ್ತಲೋ ಪರಂಚುತ್ತಲೋ ಮನೆಗೆಲಸ ಮಾಡುತ್ತಾ ದಣಿವೇ ಮೈದಾಳಿ ನಿಂತಿರುವುದಿಲ್ಲ. ಬೆಳಗ್ಗೆ ಸಂಜೆ ಎಲ್ಲ ಬಗೆಬಗೆಯ ತಿಂಡಿಗಳು. ಎಡೆ ಹೊತ್ತಿನಲ್ಲಿ ತಿನ್ನುವುದಕ್ಕೆ ಕುರುಂಕುರುಂ ಚಕ್ಕುಲಿ ಕೋಡುಬಳೆ. ಮಕ್ಕಳ ಕಲರವದಲ್ಲಿ ಮನೆಯ ಸ್ವರೂಪವೇ ಬದಲಾಯಿಸಿ ಬಿಟ್ಟಿರುತ್ತದೆ. ತಿಂಡಿ ತಿಂದು ಹೊಟ್ಟೆ ಗಟ್ಟಿಯಾದ ಪುಟ್ಟ ಮಕ್ಕಳು ಇನ್ನೇನು ಆಟಕ್ಕೆ ಅಂತ ಹೊರಡಬೇಕು, ಕಿರ್ರನೇ ಗೇಟು ತೆರೆದ ಸದ್ದು. ರಜೆಯಲ್ಲಿ ಅಂತ ಅತ್ತೆ ಮಕ್ಕಳು, ಮಾವನ ಮಕ್ಕಳು ಬಂದರೋ ಅಂತ ಗೌಜಿಯೆಬ್ಬಿಸಬೇಕು ಅನ್ನುವಷ್ಟರಲ್ಲಿ ಬಂದವರು ಅವರಾರೂ ಅಲ್ಲ. ಹತ್ತಾರು ಹುಲಿಗಳು, ಮರಿಹುಲಿಗಳು! ತಿಂಡಿಗಾಗಿ ಜಗಳಾಡುವಾಗ ಅಪ್ಪ ಹೇಳುವ ‘ಅರ್ಧ ರೊಟ್ಟಿ ಸಾಕಮ್ಮಾ’ ಕಥೆಯ ಕಣ್ಣು ಪಿಳಿಪಿಳಿ, ಬಾಲ ಪಟಪಟ ಮಾಡುತ್ತಾ ಬರುವ ಹುಲಿ...