ಬದುಕಿನ ಸಂತೃಪ್ತಿಗೆ ಸರಳತೆಯೇ ಹೂರಣ!
ಜುಲೈ 11-18ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ ರಣಭೂಮಿಯಲ್ಲಿ ರಾಮನನ್ನು ಕಂಡು, ಅವನೊಂದಿಗೆ ಕಾದಾಡಿ ವೀರೋಚಿತ ಮರಣವನ್ನಪ್ಪಬೇಕೆಂಬ ಇಂಗಿತದಿಂದ ಬಂದವನನ್ನು ಎದುರಿಸುವುದು ಲಕ್ಷ್ಮಣ. ಅವನೇ ರಾಮನಿರಬಹುದೇ ಎಂಬ ಕೌತುಕ ಅತಿಕಾಯನಿಗೆ. ಅಂತೂ ಮನವೊಪ್ಪಿದ ದೇವರಿಗೆ ರಣಾಂಗಣದಲ್ಲಾದರೂ ಪೂಜೆ ಸಲ್ಲಿಸಬೇಕೆಂಬ ಆಶಯದಿಂದ ಅತಿಕಾಯ ಸರಳಪೂಜೆ ಸಲ್ಲಿಸುತ್ತಾನೆ. ಆ ಪೂಜೆ ಸರಳವೂ ಹೌದು, ಸರಳಿನದ್ದೂ (ಬಾಣದ್ದು) ಹೌದು. ಅತಿಕಾಯನ ಭಕ್ತಿಯ ದ್ಯೋತಕವಾದ ಆ ಬಾಣಗಳನ್ನು ಲಕ್ಷ್ಮಣ ತನ್ನ ಶರೀರದಲ್ಲಿ ಧರಿಸಿ, ಶ್ರೀರಾಮನ ಪದದಾಣೆಯಾಗಿಯೂ ನೀನು ಪರಮಭಕ್ತನಹುದು ಎಂದು ಮೆಚ್ಚಿಕೊಳ್ಳುತ್ತಾನೆ, ಅತಿಕಾಯನಿಗೆ ಅವನ ಅಪೇಕ್ಷೆಯಂತೆ ಮೋಕ್ಷವನ್ನೊದಗಿಸುತ್ತಾನೆ. ಮೂಲರಾಮಾಯಣದಲ್ಲಿ ಈ ಪ್ರಸಂಗವಿಲ್ಲದಿದ್ದರೂ ಯಕ್ಷಗಾನದಲ್ಲಿ ಇದು ಜನಮೆಚ್ಚುಗೆಯ ಕಥಾನಕ. ಪೂಜೆಗೆ ನಿಜಕ್ಕೂ ಬೇಕಾಗಿರುವುದು ಭಗವಂತನಲ್ಲಿ ಅಚಲಭಕ್ತಿ ಮತ್ತು ಶ್ರದ್ಧೆ ಎಂಬುದನ್ನು ಸಾರುವ ಸಾವಿರಾರು ಕಥೆಗಳು ನಮ್ಮ ಪುರಾಣಗಳಲ್ಲಿ, ಇತಿಹಾಸದಲ್ಲಿವೆ. ಆಡಂಬರದ, ಸಿರಿವಂತಿಕೆಯ ಮದದ ಪೂಜೆಗೆ ಭಗವಂತನು ಒಲಿದ ನಿದರ್ಶನಗಳಿಂದಲೂ ಅನನ್ಯವಾದ ಮುಗ್ಧಭಕ್ತಿಗೆ ಒಲಿದು ಬಂದ ಉದಾಹರಣೆಗಳು ಹೆಚ್ಚು. ಮಹಾಭಾರತದಲ್ಲಿಯೂ ಕೂಡಾ ಸಂಧಾನಕ್ಕಾಗಿ ಹಸ್ತಿನಾವತಿಗೆ ಹೋದ ಕೃಷ್ಣ, ಅರಮನೆಯಲ್ಲಿ ಕೌರವ ತನಗಾಗಿ ವೈಭವೋಪೇತ ಅಡುಗೆಯನ್ನು ಮಾಡಿಸಿದ್ದರೂ ಉಣ್ಣುವುದಿಲ್ಲ. ರಾಜತಾಂತ್ರಿಕವಾದ ಕಾರಣಗಳು ಅದೇನೇ ಇದ್ದರೂ ಅವನ...