ಆನ್ಲೈನ್ ಶಿಕ್ಷಣ: ಬದಲಾದೀತೇ ಸಾಮರ್ಥ್ಯದ ಮಾನದಂಡ?
ಜೂನ್ 17, 2020ರ 'ಪ್ರಜಾಪ್ರಗತಿ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಅನಿವಾರ್ಯತೆ ಹೌದೋ ಅಲ್ಲವೋ, ಅಂತೂ ಹೆಚ್ಚಿನ ಶಾಲಾ ಕಾಲೇಜುಗಳು ದಿನಕ್ಕೆ ಒಂದೆರಡು ಗಂಟೆಗಳಾದರೂ ಆನ್ಲೈನ್ ತರಗತಿ ನಡೆಸುವುದನ್ನು ಪ್ರಾರಂಭಿಸಿವೆ. ಎಲ್‌ಕೆಜಿಯ ಮಕ್ಕಳನ್ನೂ ಈ ಪ್ರಯೋಗ ಹೊರಗಿಟ್ಟಿಲ್ಲ. ಬೆಂಗಳೂರಿನ ಖಾಸಗಿ ವಿವಿಯೊಂದು ಪದವಿ ಪರೀಕ್ಷೆಗಳನ್ನೇ ಆನ್ಲೈನ್ ಮೂಲಕ ಮಾಡಿ ಮುಗಿಸಿರುವುದಾಗಿ ಘೋಷಿಸಿದೆ. ಮಕ್ಕಳ ಮೇಲಿನ ಪರಿಣಾಮ ಒಂದು ತೆರನಾದ್ದಾದರೆ ಶಿಕ್ಷಕವೃಂದದ ಮುಂದಿರುವ ಸವಾಲುಗಳೂ ಸಣ್ಣವಲ್ಲ. ಹೊಸತೊಂದು ವ್ಯವಸ್ಥೆಗೆ ಒಗ್ಗಿಕೊಳ್ಳಲೇಬೇಕಾದ ಸಂದಿಗ್ಧಕ್ಕೆ ಉಪನ್ಯಾಸಕ ವರ್ಗ ಶರಣಾಗಿದೆ. ನಾವು ನಾವಾಗಿಯೇ ಬದಲಾಗುವುದಕ್ಕೂ ಬೇರೆ ವಿಧಿಯಿಲ್ಲದೇ ಬದಲಾಗುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆಯಲ್ಲ? ಹಣ್ಣುಗಳನ್ನು ಬಲವಂತವಾಗಿ ಮಾಗಿಸುವ ಪ್ರಯತ್ನದಂತೆ ಮನಸ್ಸುಗಳನ್ನು ಮಾಗಿಸುವ ಪ್ರಯತ್ನ ಇದಾಗದೇ ಎಂಬುದೂ ಯೋಚಿಸಬೇಕಾದ ವಿಚಾರವೇ. ಆರತಿ ಪಟ್ರಮೆ | ಪ್ರಜಾಪ್ರಗತಿ | 17-06-2020 ಇನ್ನೂ ಮುಗಿಯಬೇಕಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡರೆ ಈಗಿನ ಗೊಂದಲಮಯ ಪರಿಸ್ಥಿತಿಯಲ್ಲಿ ಮಕ್ಕಳು ಕಳೆದ ಶೈಕ್ಷಣಿಕ ವರ್ಷದುದ್ದಕ್ಕೂ ಕಲಿಸಿರುವುದನ್ನು ಮರೆತೇ ಹೋಗಿರಬಹುದೇನೋ ಎಂಬ ಅನುಮಾನವೂ ಒಂದೆಡೆ ಕಾಡುತ್ತದೆ. ಹಾಗಾಗಿ ಅಗತ್ಯ ಇರುವವರಿಗಾದರೂ ಪುನರ್ಮನನ ತರಗತಿಗಳನ್ನು ನಡೆಸುವುದು ಸೂಕ್ತವೆಂದು ಒ...